ವಿಶ್ವಭಾರತಿ ವಿವಿ ವಿವಾದ: ಅಮರ್ತ್ಯ ಸೇನ್ ರಿಗೆ ಭೂದಾಖಲೆಗಳನ್ನು ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ

ಕೋಲ್ಕತಾ,ಜ.31: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ರನ್ನು ಸೋಮವಾರ ಅವರ ಬೋಲ್ಪುರ ನಿವಾಸದಲ್ಲಿ ಭೇಟಿಯಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಿಶ್ವಭಾರತಿ ವಿವಿಯು ತೆರವುಗೊಳಿಸುವಂತೆ ಅವರಿಗೆ ನೋಟಿಸ್ ಜಾರಿಗೊಳಿಸಿದ್ದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿದರು.
ಸೇನ್ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಆದೇಶಿಸುವಾಗ ಈ ವಿಷಯ ಕುರಿತು ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದೂ ಬ್ಯಾನರ್ಜಿ ತಿಳಿಸಿದರು.ವಿಶ್ವಭಾರತಿಯು ಕೇಂದ್ರೀಯ ವಿವಿಯಾಗಿದ್ದು,ಪ್ರಧಾನಿಗಳು ಅದರ ಕುಲಾಧಿಪತಿಗಳಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ವಿವಿಯ ಕುಲಪತಿ ಬಿದ್ಯುತ್ ಚಕ್ರವರ್ತಿ ತಿಳಿಸಿದ್ದಾರೆ.
ಬೀರ್ಭೂಮ್ ಜಿಲ್ಲೆಯ ಬೋಲ್ಪುರದ ಶಾಂತಿನಿಕೇತನದಲ್ಲಿ ಸೇನ್ ಅವರ ಕುಟುಂಬಕ್ಕೆ 1.25 ಎಕರೆ ಭೂಮಿಯನ್ನು ಲೀಸ್ಗೆ ನೀಡಲಾಗಿತ್ತು,ಆದರೆ ವಿವಿಯ ಹೆಚ್ಚುವರಿ 0.13 ಎಕರೆ ಭೂಮಿಯು ಸೇನ್ ಅವರ ಅಕ್ರಮ ಸ್ವಾಧೀನದಲ್ಲಿದೆ ಎಂದು ಜ.24ರಂದು ಜಾರಿಗೊಳಿಸಿದ್ದ ನೋಟಿಸ್ನಲ್ಲಿ ಆರೋಪಿಸಿದ್ದ ವಿಶ್ವಭಾರತಿ,ಅದನ್ನು ತೆರವುಗೊಳಿಸುವಂತೆ ಅವರಿಗೆ ಸೂಚಿಸಿತ್ತು. ವಿವಿಯು ಹಿಂದೆಯೂ ಸೇನ್ ಅವರಿಗೆ ಇಂತಹುದೇ ನೋಟಿಸ್ಗಳನ್ನು ಕಳುಹಿಸಿತ್ತು.
ಸೇನ್ ಅವರಿಗೆ ಭವಿಷ್ಯದಲ್ಲಿ ಕಿರುಕುಳ ನೀಡಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾನರ್ಜಿ ಅವರಿಗೆ ಭೂದಾಖಲೆಗಳನ್ನು ಹಸ್ತಾಂತರಿಸಿದ್ದಾರೆ ಎಂದು ಟಿಎಂಸಿ ತಿಳಿಸಿದೆ.ಸೇನ್ ಬಂಗಾಳವನ್ನು ಮಾತ್ರವಲ್ಲ,ಇಡೀ ದೇಶವನ್ನು ಮತ್ತು ವಿಶ್ವವನ್ನು ವೈಭವೀಕರಿಸಿದ್ದಾರೆ ಎಂದು ಹೇಳಿದ ಬ್ಯಾನರ್ಜಿ, ಬಿಜೆಪಿಯು ಅವರನ್ನು ಕೀಳಾಗಿ ನೋಡುವ ಧೈರ್ಯವನ್ನು ಇನ್ನೊಮ್ಮೆ ಮಾಡಕೂಡದು ಎಂದರು.
‘ಆದರೆ,ಭೂದಾಖಲೆಗಳ ಹಸ್ತಾಂತರದೊಂದಿಗೆ ವಿಷಯವು ಇಲ್ಲಿಗೇ ಅಂತ್ಯಗೊಳ್ಳುತ್ತದೆ ಎಂದು ನಾನು ಭಾವಿಸಿಲ್ಲ. ನನ್ನನ್ನು ನನ್ನ ಮನೆಯಿಂದ ಹೊರದಬ್ಬಲು ಬಯಸಿರುವವರ ಉದ್ದೇಶದಲ್ಲಿ ರಾಜಕೀಯವಡಗಿದೆ. ನಾನು ಜಾತ್ಯತೀತ ದೃಷ್ಟಿಕೋನಕ್ಕೆ ಆದ್ಯತೆ ನೀಡುತ್ತೇನೆ. ಕೋಮು ರಾಜಕೀಯದಲ್ಲಿ ತೊಡಗಿರುವವರು ಇದನ್ನು ಒಪ್ಪುವುದಿಲ್ಲ ’ಎಂದು ಸೇನ್ ಹೇಳಿದರು.81ರ ಹರೆಯದ ಸೇನ್ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನೀತಿಗಳ ಕಟು ಟೀಕಾಕಾರರಾಗಿದ್ದಾರೆ.







