ಮಾ.4ರಂದು ಬೃಹತ್ ಉದ್ಯೋಗ ಮೇಳ: ಯೂಸುಫ್ ಕನ್ನಿ

ಬೆಂಗಳೂರು, ಜ.31: ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾ.4ರಂದು ಲಾಲ್‍ಬಾಗ್ ಬಳಿಯಿರುವ ಅಲ್ ಅಮೀನ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಉಪಾಧ್ಯಕ್ಷ ಯೂಸುಫ್ ಕನ್ನಿ ತಿಳಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೊಂದು ಮಾದರಿ ಉದ್ಯೋಗ ಮೇಳವಾಗಿರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದರು.
ಈ ಉದ್ಯೋಗ ಮೇಳ ಆಯೋಜನೆಗೆ ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಪೇಷನಲ್ಸ್, ಜಮಾಅತೆ ಇಸ್ಲಾಮಿ ಹಿಂದ್, ಮುಸ್ಲಿಮ್ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್, ಅಲ್ ಅಮೀನ್ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು, ಇಸ್ಲಾಮಿಕ್ ಇನ್ಫಾರ್ಮೆಷನ್ ಸೆಂಟರ್, ಫಾಲ್ಕನ್ ಸಮೂಹ ಶಿಕ್ಷಣ ಸಂಸ್ಥೆಗಳು, ರಿಫಾ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಹಾಗೂ ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಕೈ ಜೋಡಿಸಿವೆ ಎಂದು ಅವರು ಮಾಹಿತಿ ನೀಡಿದರು.
ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಪೇಷನಲ್ಸ್‍ನ ರಾಜ್ಯ ಕಾರ್ಯದರ್ಶಿ ನಝೀರ್ ಅಹ್ಮದ್ ಮಾತನಾಡಿ, ಸುಮಾರು 10 ಸಾವಿರ ಉದ್ಯೋಗ ಅವಕಾಶಗಳು ಲಭ್ಯವಿದೆ. ಉದ್ಯೋಗ ಮೇಳದಲ್ಲಿ 5 ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಕೇವಲ ನಮ್ಮ ರಾಜ್ಯದವರಷ್ಟೇ ಅಲ್ಲ ನೆರೆಯ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರ, ತೆಲಂಗಾಣದಿಂದಲೂ ಆಕಾಂಕ್ಷಿಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದರು.
ಅಲ್ ಅಮೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಉಮರ್ ಇಸ್ಮಾಯಿಲ್ ಖಾನ್ ಮಾತನಾಡಿ, ಕಾರ್ಪೋರೇಟ್ ಸಂಸ್ಥೆಗಳ ಅಗತ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಸಿದ್ಧವಾಗಬೇಕಿದೆ. ಅದಕ್ಕಾಗಿ, ಈ ಉದ್ಯೋಗ ಮೇಳ ನಡೆಯುವ ಮುನ್ನ ಫೆಬ್ರವರಿ ತಿಂಗಳಲ್ಲಿ ಆಕಾಂಕ್ಷಿಗಳಿಗೆ ಸಂದರ್ಶನ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಿಫಾ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಕಾರ್ಯದರ್ಶಿ ಫಿರೋಝ್, ಎಸ್‍ಐಓ ರಾಜ್ಯ ಕಾರ್ಯದರ್ಶಿಗಳಾದ ಅಫ್ನಾನ್ ಹಾಗೂ ಮುಹಮ್ಮದ್ ಪೀರ್ ಲಟಗೇರಿ, ಸಾಲಿಡಾರಿಟಿ ಯೂತ್ ಮೂವ್ಮೆಂಟ್‍ನ ಮಾಝ್ ಮೊಹಿಯಾರ್, ಇಸ್ಲಾಮಿಕ್ ಇನ್ಫಾರ್ಮೆಶನ್ ಸೆಂಟರ್ ಅಧ್ಯಕ್ಷ ಝೋಹೆಬ್, ಎಂಐಎ ಕಾರ್ಯದರ್ಶಿ ತಾಹೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







