ಬೇನಾಮಿ ವ್ಯವಹಾರಗಳ ಕಾಯ್ದೆಗೆ ಸಂಬಂಧಿಸಿದ ಆದೇಶವನ್ನು ಮರುಪರಿಶೀಲಿಸಿ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ ಅರ್ಜಿ

ಹೊಸದಿಲ್ಲಿ, ಜ. 31: ಬೇನಾಮಿ ವ್ಯವಹಾರಗಳ (ನಿಷೇಧ) ಕಾಯ್ದೆಯ ಜೈಲು ಅವಧಿಗೆ ಸಂಬಂಧಿಸಿದ ವಿಧಿಯು ಅಸಾಂವಿಧಾನಿಕವಾಗಿದೆ ಎಂದು ಘೋಷಿಸುವ 2022ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಪ್ರಕರಣವನ್ನು ಬಹಿರಂಗ ನ್ಯಾಯಾಲಯದಲ್ಲಿ ವಿಚಾರಣೆಗೆ ಎತ್ತಿಕೊಳ್ಳುವ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮಂಗಳವಾರ ಒಪ್ಪಿಕೊಂಡಿದ್ದಾರೆ. ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸಂಬಂಧಪಟ್ಟ ನ್ಯಾಯಾಧೀಶರ ಕೋಣೆಗಳಲ್ಲಿ ನಡೆಸಲಾಗುತ್ತದೆ.
ಬೇನಾಮಿ ವ್ಯವಹಾರಗಳ (ನಿಷೇಧ) ಕಾಯ್ದೆಯ 3(2) ವಿಧಿಯು ಸ್ವೇಚ್ಛಾಚಾರದ ಅಧಿಕಾರವನ್ನು ನೀಡುತ್ತದೆ ಎನ್ನುವುದು ಮೇಲ್ನೋಟಕ್ಕೇ ಕಂಡುಬರುತ್ತದೆ; ಹಾಗಾಗಿ ಅದು ಅಸಾಂವಿಧಾನಿಕವಾಗಿದೆ ಎಂದು ಕಳೆದ ವರ್ಷದ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆ ವಿಧಿಯ ಪ್ರಕಾರ, 1988 ಸೆಪ್ಟಂಬರ್ 5 ಮತ್ತು 2016 ಅಕ್ಟೋಬರ್ 25ರ ನಡುವೆ ಬೇನಾಮಿ ವ್ಯವಹಾರ ನಡೆಸಿರುವ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳವರೆಗಿನ ಜೈಲುವಾಸದ ಶಿಕ್ಷೆಯನ್ನು ನೀಡಬಹುದಾಗಿದೆ ಎಂದು ಈ ವಿಧಿ ಹೇಳುತ್ತದೆ.
ಕಾಯ್ದೆಯ ಈ ವಿಧಿಯು ಸಂವಿಧಾನದ 20(1) ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾನೂನು ಜಾರಿಗೆ ಬಂದ ಅವಧಿಯಲ್ಲಿ ಅಪರಾಧವಾಗಿರದ ಯಾವುದೇ ಅಪರಾಧಕ್ಕಾಗಿ ಯಾರಿಗೂ ಶಿಕ್ಷೆ ವಿಧಿಸಬಾರದು ಎಂದು ಸಂವಿಧಾನದ ಈ ವಿಧಿ ಹೇಳುತ್ತದೆ.
ಬೇನಾಮಿ ವ್ಯವಹಾರವೆಂದರೆ, ಯಾವುದಾದರೊಂದು ವ್ಯವಹಾರ ಅಥವಾ ಗುತ್ತಿಗೆಯನ್ನು ಹಣ ಹಾಕಿದ ವ್ಯಕ್ತಿಯ ಬದಲಿಗೆ ಬೇರೊಬ್ಬ ವ್ಯಕ್ತಿಯು ನಡೆಸುವುದು.ಅದೂ ಅಲ್ಲದೆ, ಬೇನಾಮಿ ವ್ಯವಹಾರಗಳ (ನಿಷೇಧ) ತಿದ್ದುಪಡಿ ಕಾಯ್ದೆಯನ್ನು ಪೂರ್ವಾನ್ವಯವಾಗಿ ಜಾರಿಗೊಳಿಸುವಂತಿಲ್ಲ ಎಂಬುದಾಗಿಯೂ ನ್ಯಾಯಾಲಯ ತೀರ್ಪು ನೀಡಿತ್ತು. ಯಾವುದೇ ಆಸ್ತಿಯು ಬೇನಾಮಿ ವ್ಯವಹಾರದ ಭಾಗವಾಗಿದ್ದರೆ ಅದನ್ನು ಕೇಂದ್ರ ಸರಕಾರವು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ ಎಂದು ತಿದ್ದುಪಡಿ ಕಾಯ್ದೆಯು ಹೇಳಿತ್ತು.
ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ವಿವಾದಾತೀತ ಕಾನೂನು ವಿಧಿಗಳನ್ನೂ ರದ್ದುಗೊಳಿಸಿದೆ ಎಂದು ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ಹೇಳಿದರು. ‘‘ಆದೇಶ ಮರುಪರಿಶೀಲನಾ ಅರ್ಜಿಯ ಬಹಿರಂಗ ವಿಚಾರಣೆಯನ್ನು ನಾವು ಬಯಸುತ್ತೇವೆ’’ ಎಂದು ಅವರು ಹೇಳಿದರು. ‘‘ಈ ತೀರ್ಪಿನ ಹಿನ್ನೆಲೆಯಲ್ಲಿ, ಬೇನಾಮಿ ಕಾಯ್ದೆಯ ಕೆಲವು ವಿಧಿಗಳು ವಿವಾದಾತೀತವಾಗಿದ್ದರೂ ಭಾರತದಾದ್ಯಂತ ನ್ಯಾಯಾಲಯಗಳು ತುಂಬಾ ಆದೇಶಗಳನ್ನು ನೀಡುತ್ತಿವೆ’’ ಎಂದು ಅವರು ನುಡಿದರು.
ಅಕ್ಟೋಬರ್ನಲ್ಲಿ, ದಿಲ್ಲಿ ಹೈಕೋರ್ಟ್ ಸುಪ್ರೀಂ ಕೋರ್ಟ್ನ ತೀರ್ಪನ್ನು ಉಲ್ಲೇಖಿಸಿ, ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಈ ಕಾಯ್ದೆಯನ್ವಯ ದಾಖಲಿಸಲಾಗಿದ್ದ ಮೊಕದ್ದಮೆಯನ್ನು ರದ್ದುಪಡಿಸಿತ್ತು. ಹಾಗಾಗಿ, ಕೇಂದ್ರ ಸರಕಾರ ಈಗ ನೆಮ್ಮದಿ ಪಡೆಯಲು ಸುಪ್ರೀಂ ಕೋರ್ಟ್ನತ್ತ ಧಾವಿಸಿದೆ.







