ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ 1,966.45 ಕೋಟಿ ರೂ. ಅನುದಾನ: ಶಾಸಕ ಭರತ್ ಶೆಟ್ಟಿ

ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ 1,966.45 ಕೋಟಿ ಅನುದಾನ ಈ ವರೆಗೆ ದೊರೆತಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದಲ್ಲಿ ತಮ್ಮ ಅವಧಿಯಲ್ಲಿ 6,455 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಮಾಹಿತಿ ನೀಡಿದರು.
ಸ್ಮಾರ್ಟ್ ಯೋಜನೆಯಲ್ಲಿ 50 ಕೋಟಿ ರೂ: ಸ್ಮಾರ್ಟ್ ಸಿಟಿಗೆ ಯೋಜನೆ ರೂಪಿಸುವಾಗ ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರವನ್ನು ಕೈ ಬಿಡಲಾಗಿತ್ತು. ಆದರೆ ಸ್ಮಾರ್ಟ್ ಸಿಟಿ ಹೆಚ್ಚು ಪ್ರವಾಸೋದ್ಯಮವನ್ನು ಅವಲಂಭಿತವಾಗಿದೆ. ಇದಕ್ಕೆ ಅಗತ್ಯದ ಸೌಲಭ್ಯ, ಬೀಚ್, ಜಮೀನು ಇರುವುದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಹೀಗಾಗಿ ನಮ್ಮ ಪ್ರಯತ್ನದ ಫಲವಾಗಿ ಇದಕ್ಕಾಗಿ ಸುಮಾರು 50 ಕೋಟಿ ರೂ. ಅನುದಾನ ದೊರೆತಿದೆ. ಇದರಲ್ಲಿ ಮುಖ್ಯವಾಗಿ ತಣ್ಣೀರು ಬಾವಿ ಬೀಚ್ ಅಭಿವೃದ್ಧಿಗೆ 9.78 ಕೋಟಿ ರೂ. ಅನುದಾನ ದೊರೆತಿದೆ. ನಿರಂತರದ ಪ್ರಯತ್ನದ ಫಲವಾಗಿ ಇದನ್ನು ಬ್ಲೂಫ್ಲಾಗ್ ಬೀಚ್ ಆಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರದಿಂದ ಅನುಮತಿ ಸಿಕ್ಕಿದೆ. ಈಗ ಅಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ ಎಂದು ಹೇಳಿದರು.
ನಾಯರ್ ಕುದ್ರು ಪ್ರವಾಸಿ ಕೇಂದ್ರ: ತಣ್ಣಿರುಬಾವಿ ಸಂಪರ್ಕಿಸಲು ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಾಯರ್‌ಕುದ್ರುವಿನಲ್ಲಿ 1.5 ಕೋಟಿ ರೂ ವಚ್ಚದಲ್ಲಿ ರಸ್ತೆ ನಿರ್ಮಿಸಲಾಗುವುದು. ನಾಯರ್‌ಕುದ್ರುವನ್ನು ಸುಮಾರು 42 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುವುದು . ಇದಕ್ಕಾಗಿ ಟೆಂಡರ್ ಕರೆಯಲಾಗಿದೆ.ಈ ಉದ್ದೇಶಕ್ಕಾಗಿ ಸಿಆರ್‌ಝೆಡ್ ನಿಯಮಗಳನ್ನು ಸರಳೀಕರಣಗೊಳಿಸುವ ಪ್ರಯತ್ನ ನಡೆದಿದೆ. ಸಚಿವ ಆನಂದ್ ಸಿಂಗ್ ಈ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹಿಂದೆ ಪಣಂಬೂರು ಬೀಚ್‌ನಲ್ಲಿ ವರ್ಷಕ್ಕೆ 10 ಲಕ್ಷ ರೂ. ಆದಾಯ ಬರುತ್ತಿತ್ತು. ಖಾಸಗಿ ಸಹಭಾಗಿತ್ವದಲ್ಲಿ ಈಗ ತಿಂಗಳಿಗೆ 12 ಲಕ್ಷ ರೂ. ಸಿಗುವಂತಾಗಿದೆ. ಇಡ್ಯ ಬೀಚ್‌ನ್ನು ಅಭಿವೃದ್ಧಿಗೆ ಸರಕಾರದಿಂದ ನೇರವಾಗಿ ಅನುದಾನಕ್ಕೆ ಮನವಿ ಮಾಡಲಾಗಿದೆ . ಲೈಟ್ ಹೌಸ್ ಪಕ್ಕದ ಪರಿಸರದ ಅಭಿವೃದ್ಧಿಗೆ ಎಂದರು.
ಹೆಲಿಟೂರಿಸಂ: ಹೆಲಿ ಟೂರಿಸಮ್‌ಗೆ ಪ್ರಯತ್ನ ನಡೆಸಲಾಗುವುದು. ಈ ಯೋಜನೆಯಲ್ಲಿ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಶ್ರಂಗೇರಿ ಮತ್ತು ಶಬರಿಮಲೆಗೆ ಸಂಪರ್ಕ ವ್ಯವಸ್ಥೆ ಮಾಡಲಾಗುವುದು ಎಂದು ನುಡಿದರು.
ಸುರತ್ಕಲ್, ಕೊಟ್ಟಾರ , ಹೊನ್ನಕಟ್ಟೆ ಜಂಕ್ಷನ್‌ನ್ನು ತಲಾ 5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಮೂಲಭೂತ ಸಮಸ್ಯೆಗಳ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮಾಂತರ ಪ್ರದೇಶದ ಪ್ರತಿ ಮನೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಒಂದೂವರೆ ವರ್ಷದಲ್ಲಿ ಜಾರಿಯಾಗಲಿದೆ.
ಅಡ್ಯಾರು , ಅರ್ಕುಳ ಗ್ರಾಮದವರು ಗುರುಪುರ ಹೋಬಳಿಗೆ ಸೇರಿದ್ದಾಗ ಸಮಸ್ಯೆ ಎದುರಿಸುತ್ತಿದ್ದರು. ಈಗ ಈ ಗ್ರಾಮಗಳನ್ನು ಮಂಗಳೂರು ಹೋಬಳಿಗೆ ಸೇರ್ಪಡೆಗೊಳಿಸಿರುವುದರಿಂದ ಅವರ ಸಮಸ್ಯೆ ನಿವಾರಣೆಯಾಗಿದೆ ಎಂದು ಹೇಳಿದರು.