ಹಿಂಡೆನ್‌ಬರ್ಗ್ ವರದಿಯು ಕುರಿತು ಅದಾನಿಯಿಂದ ಸ್ಪಷ್ಟನೆ ಕೇಳಿದ LIC

ಮುಂಬೈ: ಹಿಂಡೆನ್‌ಬರ್ಗ್ ವರದಿ ಕುರಿತು ಅದಾನಿ ಸಮೂಹದಿಂದ ಜೀವ ವಿಮಾ ನಿಗಮವು ಸ್ಪಷ್ಟನೆ ಕೇಳಲಿದೆ ಎಂದು ಜೀವ ವಿಮಾ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ಅದಾನಿ ಸಮೂಹದ ಷೇರುಗಳನ್ನು ಜೀವ ವಿಮಾ ನಿಗಮ ಖರೀದಿಸುತ್ತಿದ್ದು, ಅದರ ಒಟ್ಟು ಮೊತ್ತ ರೂ. 30,127 ಕೋಟಿ ಇದ್ದದ್ದು, ಜನವರಿ 27, 2023ಕ್ಕೆ ಅಂತ್ಯಗೊಂಡಂತೆ ರೂ. 56,142 ಕೋಟಿಗೇರಿದೆ ಎಂದು ಅವರು ತಿಳಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಜೀವ ವಿಮಾ ನಿಗಮ, "ಈಕ್ವಿಟಿ ಮತ್ತು ಸಾಲದ ರೂಪದಲ್ಲಿ ಅದಾನಿ ಸಮೂಹದಲ್ಲಿ ಒಟ್ಟು ರೂ. 35,917 ಕೋಟಿ ಹೂಡಿಕೆ ಮಾಡಲಾಗಿದೆ. ಜೀವ ವಿಮಾ ನಿಗಮವು ಹೊಂದಿರುವ ಅದಾನಿ ಸಮೂಹದ ಎಲ್ಲ ಸಾಲ ಭದ್ರತೆಯ ಶ್ರೇಯಾಂಕ AA ಮತ್ತು ಅದರ ಮೇಲೆ ಇದ್ದು, ವಿಮಾ ಸಂಸ್ಥೆಗಳಿಗೆ ನಿಗದಿಪಡಿಸಲಾಗಿರುವ ಇರ್ದಾಯಿ ಹೂಡಿಕೆ ನಿಯಂತ್ರಣ ನಿಯಮಗಳಿಗೆ ತಕ್ಕುದಾಗಿದೆ" ಎಂದು ಹೇಳಿದೆ.
ಒಟ್ಟಾರೆ ರೂ. 41.6 ಲಕ್ಷ ಕೋಟಿ ಮೌಲ್ಯದ ನಿರ್ವಹಣಾ ಸಂಪತ್ತು ಹೊಂದಿರುವ ಜೀವ ವಿಮಾ ನಿಗಮವು, ಅದಾನಿ ಸಮೂಹದಲ್ಲಿ ತಾನು ಹೂಡಿಕೆ ಮಾಡಿರುವ ಬಂಡವಾಳದ ಕುರಿತು ಮಾಧ್ಯಮಗಳಲ್ಲಿ ಸೃಷ್ಟಿಯಾಗಿರುವ ವದಂತಿಗಳಿಗೆ ಈ ಸ್ಪಷ್ಟನೆ ನೀಡಿದೆ. ಪುಸ್ತಕದ ಮೌಲ್ಯದ ಪ್ರಕಾರ, ತನ್ನ ನಿರ್ವಹಣಾ ಸಂಪತ್ತಿನ ಪೈಕಿ ಶೇ. 1ರಷ್ಟು ಮಾತ್ರ ಬಂಡವಾಳವನ್ನು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವುದಾಗಿ ಜೀವ ವಿಮಾ ನಿಗಮವು ಸ್ಪಷ್ಟಪಡಿಸಿದೆ.
ಅಮೆರಿಕಾದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯ ವರದಿಯು ಅದಾನಿ ಸಮೂಹದ ಶೇರು ಮೌಲ್ಯದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಬೆನ್ನಿಗೇ ಕಳೆದ ಮೂರು ದಿನಗಳ ಅವಧಿಯಲ್ಲಿ ಅದಾನಿ ಸಮೂಹದ ಶೇರು ದರ ತೀವ್ರ ಕುಸಿತ ಕಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೀವ ವಿಮಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್, "ನಮ್ಮ ವಿಮಾ ಸಂಸ್ಥೆಯು ದೀರ್ಘಕಾಲೀನ ದೂರದೃಷ್ಟಿಯಿಂದ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದೆ" ಎಂದು Reuters ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ನಾವು ಎಲ್ಲ ಮಾಹಿತಿ, ಸ್ಪಷ್ಟೀಕರಣವನ್ನು ಸಂಗ್ರಹಿಸಿದ ನಂತರವಷ್ಟೇ ಮುಂದಿನ ನಡೆಯ ಕುರಿತು ನಿರ್ಧರಿಸಲಿದ್ದೇವೆ. ಈ ನಿರ್ಧಾರವು ಸ್ವತಂತ್ರ ಅಪಾಯ ಮೌಲ್ಯಮಾಪನ, ಆಂತರಿಕ ಅಪಾಯ ಮೌಲ್ಯಮಾಪನ, ವ್ಯಾವಹಾರಿಕ ಸ್ವರೂಪ ಹಾಗೂ ಬೆಳವಣಿಗೆ ಪಥವನ್ನು ಅವಲಂಬಿಸಿರುತ್ತದೆ" ಎಂದೂ ಸ್ಪಷ್ಟಪಡಿಸಿದ್ದಾರೆ.







