ಬೆಂಗಳೂರು | ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯನ ಕಿರುಕುಳ ಆರೋಪ: ವೈದ್ಯೆ ಆತ್ಮಹತ್ಯೆ

ಬೆಂಗಳೂರು, ಫೆ.2: ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ನೊಂದು ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಜಯ್ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಉತ್ತರ ಪ್ರದೇಶ ಲಕ್ನೋ ಮೂಲದ ಡಾ.ಪ್ರಿಯಾಂಶಿ ತ್ರಿಪಾಠಿ ಆತ್ಮಹತ್ಯೆ (suicide) ಮಾಡಿಕೊಂಡ ವೈದ್ಯೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿದ್ದ ಇವರು ಜನವರಿ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ಮೃತರ ತಂದೆ ಸುಶೀಲ್ ತ್ರಿಪಾಠಿ ಪೊಲೀಸ್ ದೂರು ನೀಡಿದ್ದಾರೆ.
ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯ ಡಾ.ಸುಮಿತ್ ಎಂಬಾತ ಪ್ರಿಯಾಂಶಿಗೆ ಪ್ರೇಮ ನಿವೇದನೆ ಮಾಡುತ್ತಿದ್ದು, ಮದುವೆಯಾಗುವಂತೆ ಪದೇಪದೇ ಒತ್ತಾಯಿಸುತ್ತಿದ್ದ. ಆದರೆ ಪ್ರಿಯಾಂಶಿ ಇದನ್ನು ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆತ ಪ್ರಿಯಾಂಶಿ ನಡೆತ ಬಗ್ಗೆ ಅಪಪ್ರಚಾರ ಮಾಡಿದ್ದಾನೆ. ಇದರಿಂದ ಮನನೊಂದು ಪ್ರಿಯಾಂಶಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಶೀಲ್ ತ್ರಿಪಾಠಿ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಸಂಜಯ್ ನಗರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







