ಮಂಗಳೂರು: ಚಿನ್ನಾಭರಣದ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಕೊಲೆ

ಮಂಗಳೂರು: ನಗರದ ಚಿನ್ನಾಭರಣದ ಅಂಗಡಿಯೊಂದರ ಸಿಬ್ಬಂದಿಯನ್ನು ಹಗಲುಹೊತ್ತಿನಲ್ಲೇ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆಗೈದ ಘಟನೆ ಶುಕ್ರವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಹಂಪನಕಟ್ಟೆಯಲ್ಲಿರುವ ‘ಮಂಗಳೂರು ಜ್ಯುವೆಲ್ಲರ್ಸ್’ನಲ್ಲಿ ಕೆಲಸ ಮಾಡುತ್ತಿದ್ದ ಅತ್ತಾವರ ನಿವಾಸಿಯಾಗಿರುವ ರಾಘವೇಂದ್ರ ಆಚಾರ್ಯ (50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಜ್ಯುವೆಲ್ಲರಿಯ ಮಾಲಕ ಕೇಶವ ಆಚಾರ್ಯ ಮಧ್ಯಾಹ್ನ 1:30ಕ್ಕೆ ಊಟಕ್ಕೆ ತೆರಳಿದ್ದು, 3:44ರ ವೇಳೆಗೆ ಮರಳಿ ಅಂಗಡಿಯ ಬಳಿ ಬಂದು ಕಾರು ನಿಲ್ಲಿಸಿದಾಗ ‘ತನಗೆ ಚೂರಿಯಿಂದ ಇರಿಯುತ್ತಿದ್ದಾರೆ’ ಎಂದು ರಾಘವೇಂದ್ರ ಆಚಾರ್ಯರು ಬೊಬ್ಬೆ ಹಾಕುವುದು ಕೇಳಿಸಿದೆ. ತಕ್ಷಣ ಕೇಶವ ಆಚಾರ್ಯರು ಅಂಗಡಿಯತ್ತ ತೆರಳಿದಾಗ ಮುಖಕ್ಕೆ ಮಾಸ್ಕ್ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದ ರಾಘವೇಂದ್ರ ಆಚಾರ್ಯರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರೊಳಗೆ ಅವರು ಸಾವಿಗೀಡಾಗಿದ್ದರು ಎನ್ನಲಾಗಿದೆ.
ಕೊಲೆ ಕೃತ್ಯ ನಡೆಯುವುದಕ್ಕಿಂತ ಸುಮಾರು 20 ನಿಮಿಷ ಮೊದಲೇ ಅಪರಿಚಿತ ವ್ಯಕ್ತಿಯು ಜ್ಯುವೆಲ್ಲರಿ ಅಂಗಡಿಗೆ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಈತ ಚಿನ್ನಾಭರಣ ಕಳವು ಮಾಡುವುದಕ್ಕಾಗಿ ಅಂಗಡಿಗೆ ನುಗ್ಗಿರಬೇಕು ಎಂದು ಶಂಕಿಸಲಾಗಿದೆ. ಜ್ಯುವೆಲ್ಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಚಿನ್ನಾಭರಣದಲ್ಲಿ ಕೆಲವು ನಾಪತ್ತೆಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ದೂರು ನೀಡಲಾಗುವುದು ಎಂದು ಅಂಗಡಿ ಮಾಲಕ ಕೇಶವ ಆಚಾರ್ಯ ತಿಳಿಸಿದ್ದಾರೆ.
ಏಳು ತಿಂಗಳಿನಿಂದ ಕೆಲಸ: ರಾಘವೇಂದ್ರ ಆಚಾರ್ಯರು ಹಲವು ಚಿನ್ನಾಭರಣದ ಅಂಗಡಿಯಲ್ಲಿ ಕೆಲಸ ಮಾಡಿದ ಅನುಭವವಿದ್ದು, ಏಳು ತಿಂಗಳಿನಿಂದ ಮಂಗಳೂರು ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ರಾಘವೇಂದ್ರ ಆಚಾರ್ಯರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬರು ವಿದೇಶದಲ್ಲೂ ಮತ್ತೊಬ್ಬರು ಮಂಗಳೂರಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಅನ್ಶು ಕುಮಾರ್, ಬಂದರು ಇನ್‌ಸ್ಪೆಕ್ಟರ್ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಟಿಪ್ಪರ್ ಲಾರಿ ಹರಿಸಿ ವ್ಯಕ್ತಿಯ ಕೊಲೆ: ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲು