ಮಂಗಳೂರು: ಶರಣ್ ಪಂಪ್ವೆಲ್ ಗಡಿಪಾರಿಗೆ ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ
ಮಂಗಳೂರು: ತುಮಕೂರಿನಲ್ಲಿ ನಡೆದ ಶೌರ್ಯಯಾತ್ರೆ ಕಾರ್ಯಕ್ರಮದಲ್ಲಿ ಕೋಮು ಪ್ರಚೋದನಕಾರಿ ಭಾಷಣಗೈದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ನನ್ನು ದ.ಕ. ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಡಿವೈಎಫ್ಐ ದ.ಕ.ಜಿಲ್ಲಾ ಸಮಿತಿಯು ಶುಕ್ರವಾರ ನಗರದ ಮಿನಿಸೌಧದ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಬಿಜೆಪಿ ಯುವ ಮೋರ್ಚಾದ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ನಲ್ಲಿ ಮಂಗಳಪೇಟೆಯ ಫಾಝಿಲ್ನನ್ನು ಕೊಲೆ ಮಾಡಿರುವುದಾಗಿ ಬಹಿರಂಗವಾಗಿ ಹೇಳಿಕೊಂಡ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಕೂಡ ಇನ್ನೂ ಆತನ ಬಂಧನವಾಗಿಲ್ಲ. ದ.ಕ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಕ್ಷಣ ಶರಣ್ ಪಂಪ್ವೆಲ್ನನ್ನು ಬಂಧಿಸಬೇಕು ಮತ್ತು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಒತ್ತಾಯಿಸಿದರು.
ಫಾಝಿಲ್ ಕೊಲೆಯ ಹಿಂದಿನ ಸೂತ್ರಧಾರಿಗಳನ್ನು ಬಂಧಿಸಬೇಕು ಎಂದು ಆತನ ತಂದೆ ಒತ್ತಾಯಿಸುತ್ತಲೇ ಇದ್ದರು. ಆದರೆ ಪೊಲೀಸರು ಕೊಲೆಕೃತ್ಯದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿಲ್ಲ. ಇದೀಗ ಸ್ವತಃ ಶರಣ್ ಪಂಪ್ವೆಲ್ ಪ್ರತೀಕಾರದ ಕೊಲೆ ಮಾಡಲಾಗಿದೆ ಎಂದಿದ್ದಾರೆ. ಈ ಬಗ್ಗೆ ಪ್ರಕರಣವೂ ದಾಖಲಾಗಿದೆ. ಆದರೆ ಇನ್ನೂ ಬಂಧನವಾಗದಿರುವುದು ವಿಪರ್ಯಾಸ ಎಂದು ಬಿ.ಕೆ.ಇಮ್ತಿಯಾಝ್ ಹೇಳಿದರು.
ಗುಜರಾತ್ನಲ್ಲಿ ಕರಸೇವಕರ ಹತ್ಯೆಗೆ ಪ್ರತೀಕಾರವಾಗಿ 2 ಸಾವಿರ ಮಂದಿಯ ಕೊಲೆ ಮಾಡಲಾಗಿದೆ ಎಂದಿದ್ದಾರೆ. ಅದರಲ್ಲಿ ಎಷ್ಟು ಮಂದಿ ಹಿಂದೂಗಳನ್ನು ಈ ಹಿಂದುತ್ವವಾದಿಗಳು ಕೊಲೆಗೈದಿದ್ದಾರೆ ಎಂಬುದರ ಬಗ್ಗೆಯೂ ತಿಳಿಸಬೇಕು ಎಂದು ಬಿ.ಕೆ.ಇಮ್ತಿಯಾಝ್ ಒತ್ತಾಯಿಸಿದರು.
ಜಾತ್ರೆಗಳಲ್ಲಿ ಬಡ ಮುಸ್ಲಿಮರು ವ್ಯಾಪಾರ ಮಾಡಬಾರದು ಎನ್ನುವ ಹಿಂದುತ್ವವಾದಿ ಸಂಘಟನೆಗಳ ಮುಖಂಡರು ಮುಸ್ಲಿಮರ ಒಡೆತನದಲ್ಲಿರುವ ಮಾಲ್ಗಳ ಭದ್ರತೆಯ ಗುತ್ತಿಗೆಗಳನ್ನು ವಹಿಸಿಕೊಳ್ಳುವುದು ಎಷ್ಟು ಸರಿ ಎಂದು ಬಿ.ಕೆ.ಇಮ್ತಿಯಾಝ್ ಪ್ರಶ್ನಿಸಿದರು.
ಈ ಸಂದರ್ಭ ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ಸಾದಿಕ್ ಕಣ್ಣೂರು, ಮುಸ್ತಫಾ ಕಲ್ಲಕಟ್ಟ, ಹನೀಫ್ ಬೆಂಗ್ರೆ, ತ್ವಯಿಬ್ ಬೆಂಗ್ರೆ, ಅಸುಂತ ಡಿಸೋಜ, ಯೋಗಿತ್ ಉಳ್ಳಾಲ, ನಿತಿನ್ ಕುತ್ತಾರ್, ಇಬ್ರಾಹೀಂ ಮದಕ, ಆಸೀಫ್ ಬಾವಾ ಉರುಮಣೆ, ಅಶ್ರಫ್ ಅಳೇಕಲ, ಮುಹಮ್ಮದ್ ಶಾಲಿ ಸೌಹಾರ್ದ ನಗರ ಬಜ್ಪೆ ಮತ್ತಿತರರು ಪಾಲ್ಗೊಂಡಿದ್ದರು.