ಕೊಡಮಕ್ಕಿ ಜಂಗಲ್ಪೀರ್: ಸ್ವಲಾತ್ ಮಜ್ಲಿಸ್-ಪ್ರಾರ್ಥನಾ ಸಂಗಮ

ಬೈಂದೂರು: ಪಾವಿತ್ರತೆಯಿಂದ ಕೂಡಿದ ಕೊಡಮಕ್ಕಿ ಜಂಗಲ್ಪೀರ್ ನಲ್ಲಿ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮವು ಪ್ರೊಜೆಕ್ಟ್ ಅಭಿವೃದ್ಧಿ ಸಮಿತಿಯ ವತಿಯಿಂದ ಗೌಸಿಯ ಮಸೀದಿ ವಠಾರದಲ್ಲಿ ಶುಕ್ರವಾರ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿ.ಎಚ್. ಅಬ್ದುಲ್ ಮುತ್ತಲಿ ವಂಡ್ಸೆ ಮಾತನಾಡಿ, ಜಂಗಲ್ಪೀರ್ ಪ್ರದೇಶವು ವಕ್ಫ್ ಬೋರ್ಡ್‌ಗೆ ಸಂಬಂಧ ಪಟ್ಟಿದ್ದು, ಇದನ್ನು ಅಭಿವೃದ್ಧಿ ಪಡಿಸಿ, ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಅಸ್ಸಯ್ಯಿದ್ ಜಾಫರ್ ಅಸ್ಸಖಾಪ್ ತಂಳ್ ಕೋಟೇಶ್ವರ ಉದ್ಘಾಟಿಸಿದರು. ಮೌಲಾನಾ ಡಾ.ಮುಹಮ್ಮದ್ ಫಾಜಿಲ್ ರಝ್ವಿ ಕಾವಳಕಟ್ಟೆ ಮಜ್ಲಿಸ್ ನೇತೃತ್ವ ವಹಿಸಿದ್ದರು. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾವಿನಕಟ್ಟೆ ಇಸ್ಮಾಯಿಲ್ ಮದನಿ, ನಾವುಂದ ಅಬ್ದುಲ್ಲತೀಫ್ ಫಾಲಿಲಿ, ಆಕಳಬೈಲು ಇಸ್ಮಾಯಿಲ್ ಮುಸ್ಲಿಯಾರ್, ಸಯ್ಯದ್ ಇಕ್ಬಾಲ್ ಮೌಲಾನಾ, ತೊಯ್ಯಿಬ್ ಮೌಲಾನಾ, ತೌಫೀಖ್ ಹಾಜಿ ನಾವುಂದ, ಸಮದ್ ಬಾಯಿ ಬೈಂದೂರ್, ಬಿಎಸ್‌ಎಫ್ ರಫೀಕ್, ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಬದ್ರುದ್ದೀನ್ ತೌಫೀಖ್ ನಾವುಂದ, ಅಡ್ವಕೇಟ್ ಸುಹಾನ್, ಸದಸ್ಯರಾದ ಆಸಿಫ್ ಕಟಪಾಡಿ, ಅಬೂಬಕ್ಕರ್ ಮಾವಿನಕಟ್ಟೆ, ಆದಮ್ ಗುಲ್ವಾಡಿ, ಪ್ರಮುಖರಾದ ವಸೀಮ್ ಬಾಷಾ, ಅಡ್ವಕೇಟ್ ಇಲ್ಯಾಸ್, ಇಬ್ರಾಹಿಮ್ ಮಾನಿಕೊಳಲು ಮುಜಾಹಿದ್ ಪಾಷಾ ಮೊದಲಾದವರು ಉಪಸ್ಥಿತರಿದ್ದರು.
ಮೌಲಾನಾ ತಂಝೀರೆ ಆಲಮ್ ಕಿರಾಅತ್ ಪಠಿಸಿದರು. ಪ್ರೊಜೆಕ್ಟ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕೆ.ಎ.ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ, ವಂದಿಸಿದರು.