ಬನ್ನಂಜೆ ಬಾಲಭವನದಲ್ಲಿ ಸಂಜೀವಿನಿ ಸಂತೆಗೆ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ - ಸಂಜೀವನಿ ಇವರ ಆಶ್ರಯದಲ್ಲಿ ಉಡುಪಿಯ ಬನ್ನಂಜೆ ಬಾಲ ಭವನ ಆವರಣದಲ್ಲಿ ಸಂಜೀವಿನಿ ಸಂತೆಯನ್ನು ರವಿವಾರ ಆಯೋಜಿಸಲಾಗಿತ್ತು.
ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನ ಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಬಾಲಭವನ ಅಭಿವೃದ್ಧಿ ಅನುದಾನದಲ್ಲಿ ಮಾರಾಟಕ್ಕೆ ಅನುಕೂಲವಾಗುವಂತೆ ಸುಸಜ್ಜಿತ ಮೇಲ್ಚಾವಣಿಯನ್ನು ನಿರ್ಮಿಸಿಕೊಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾನಿಧಿಕಾರಿ ಪ್ರಸನ್ನ ಎಚ್., ಮುಂದಿನ ದಿನಗಳಲ್ಲಿ ಪ್ರತೀ ರವಿವಾರ ಸಂಜೀವಿನಿ ಸಂತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕು. ಹಾಗೇ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಬನ್ನಂಜೆ ಆಸುಪಾಸಿನ ವಸತಿ ಸಮುಚ್ಚಯದ ಸರ್ವರೂ ಆಗಮಿಸಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಮತ್ತು ಸಂಜೀವನಿ ತಾಲೂಕು ಅಭಿಯಾನ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.