ಮಂಗಳೂರು | ಕುಲಶೇಖರ ರೈಲ್ವೆ ಹಳಿ ಕಾಮಗಾರಿ ಹಿನ್ನೆಲೆ: ಫೆ.6ರಿಂದ ಮಾ.3ರ ವರೆಗೆ ಸಂಚಾರದಲ್ಲಿ ವ್ಯತ್ಯಯ

ಮಂಗಳೂರು, ಫೆ.5: ನಗರದ ಕುಲಶೇಖರದ ರೈಲು ಹಳಿಯ ಹಳೆಯ ಸುರಂಗ ಮಾರ್ಗದಲ್ಲಿ ಹಳಿಗಳ ಬದಲಾವಣೆ, ಸಿಗ್ನಲ್ ವ್ಯವಸ್ಥೆ ಸಹಿತ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಫೆ.6ರಿಂದ ಮಾ.3ರ ತನಕ ರೈಲು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಈ ಬದಲಾವಣೆಯು ಕೇರಳ ಮೂಲದ ರೈಲುಗಳ ಸಹಿತ ಹಲವು ರೈಲುಗಳ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿದು ಬಂದಿದೆ.ಈ ಅವಧಿಯಲ್ಲಿ ಮಂಗಳೂರು-ಮಡಗಾಂವ್ ಎಕ್ಸ್ಪ್ರೆಸ್ ವಿಶೇಷ ರೈಲು (06602/06601) ರದ್ದಾಗಿದೆ. ಮುಂಬೈ ಸಿಎಸ್ಎಂಟಿ - ಮಂಗಳೂರು ಜಂಕ್ಷನ್ (12133/12134) ರೈಲು ಸುರತ್ಕಲ್ ತನಕ ಮಾತ್ರ ಸಂಚರಿಸಲಿದೆ. ಸುರತ್ಕಲ್ ತನಕ ಮಾತ್ರ ಸಂಚರಿಸುವ ರೈಲುಗಳಲ್ಲಿ ಬಂದ ಮಂಗಳೂರಿನ ಪ್ರಯಾಣಿಕರು ಮಂಗಳೂರು ಜಂಕ್ಷನ್ ತನಕ ಪ್ರಯಾಣಿಸಲು ರೈಲ್ವೆ ಇಲಾಖೆ ಬಸ್ ವ್ಯವಸ್ಥೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಈ ಅವಧಿಯಲ್ಲಿ ಮಡಗಾಂವ್-ಮಂಗಳೂರು ಸೆಂಟ್ರಲ್ ಮೆಮು (10107/10108) ತೋಕೂರಿನಿಂದ ಪ್ರಯಾಣ ಬೆಳೆಸಲಿದೆ. ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ (16596) 27 ದಿನಗಳ ಕಾಲ ಪಡೀಲ್ ಬಳಿಕ 20 ನಿಮಿಷ ವಿಳಂಬವಾಗಿ ಸಂಚರಿಸಲಿದೆ. ಮಂಗಳೂರು ಜಂಕ್ಷನ್-ಯಶವಂತಪುರ ಗೋಮಟೇಶ್ವರ ಎಕ್ಸ್ಪ್ರೆಸ್(16576) ಫೆ.8ರಂದು ಮಂಗಳೂರಿನಿಂದ ಒಂದು ಗಂಟೆ ತಡವಾಗಿ ಹೊರಡಲಿದೆ.
ಕೇರಳದಿಂದ ಪಶ್ಚಿಮ ಮತ್ತು ಉತ್ತರ ಭಾರತಕ್ಕೆ ಹಲವಾರು ಸಾಪ್ತಾಹಿಕ ಎಕ್ಸ್ಪ್ರೆಸ್ ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ. ಕೆಲವು ರೈಲುಗಳು ತಡವಾಗಿ ಸಂಚರಿಸಲಿದೆ ಎಂದು ತಿಳಿಸಿದೆ.
ಮಂಗಳೂರು-ಮಡ್ಗಾಂವ್-ಮಂಗಳೂರು ಎಕ್ಸ್ಪ್ರೆಸ್ ಸ್ಪೆಷಲ್ 27 ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ. ಫೆ.7,8ರಂದು ರೈಲು ಸಂಖ್ಯೆ 06485/06484 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಮತ್ತು ರೈಲು ಸಂಖ್ಯೆ 06489/06488 ಮಂಗಳೂರು ಸೆಂಟ್ರಲ್ - ಸುಬ್ರಹ್ಮಣ್ಯ ರಸ್ತೆ ಎಕ್ಸ್ಪ್ರೆಸ್ ಸ್ಪೆಷಲ್ ರೈಲುಗಳು ರದ್ದಾಗಿವೆ.
ಕಳೆದ ವರ್ಷದ ಮಾರ್ಚ್ ನಲ್ಲಿ ಕುಲಶೇಖರದ ರೈಲ್ವೆ ನೂತನ ಸುರಂಗ ಮಾರ್ಗ ಕಾರ್ಯಾರಂಭದ ಬಳಿಕ ಕುಲಶೇಖರದ 750 ಮೀ. ಉದ್ದದ ಹಳೆಯ ಸುರಂಗ ಮಾರ್ಗದ ನವೀಕರಣ ಕಾಮಗಾರಿ ಸಂಬಂಧಿಸಿದ ಪಾಲಕ್ಕಾಡ್ ವಿಭಾಗದ ಪ್ರಸ್ತಾವನೆಗೆ ದಕ್ಷಿಣ ರೈಲ್ವೆ ಕಳೆದ ಫೆ.2ರಂದು ಅನುಮೋದನೆ ನೀಡಿತ್ತು. ಎರಡು ದಶಕಗಳ ಹಿಂದೆ ಕಾರ್ಯಾರಂಭ ಮಾಡಿದ್ದ ಹಳೆಯ ಸುರಂಗದ ಹಳಿ ಬದಲಾವಣೆ ಹಾಗೂ ತಾಂತ್ರಿಕ ವ್ಯವಸ್ಥೆಯ ಉನ್ನತೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪಾಲಕ್ಕಾಡ್ ವಿಭಾಗೀಯ ರೈಲ್ವೆ ಪ್ರಬಂಧಕ ತ್ರಿಲೋಕ್ ಕೊಥಾರಿ ಮಾಹಿತಿ ನೀಡಿದ್ದಾರೆ.
ಮಂಗಳೂರು ಜಂಕ್ಷನ್ ಮತ್ತು ಜೋಕಟ್ಟೆ ವಿಭಾಗ ನಡುವೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚರಿಸಲು ಅವಕಾಶವಿದ್ದು, ಹಳೆಯ ಸುರಂಗದ ಒಳಗೆ 20 ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸುತ್ತಿತ್ತು. ಹಳೆಯ ಸುರಂಗದ ಒಳಗಿನ ಕಾಮಗಾರಿ ಪೂರ್ಣಗೊಂಡ ಬಳಿಕ ಸುರಂಗದ ಒಳಗೆ ಕೂಡ ಹೊರಗಿನ ವೇಗದಲ್ಲೇ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.