ಬೆಂಗಳೂರು ನಗರದಲ್ಲಿ ‘ಟ್ರ್ಯಾಕ್ಟರ್’ ಸಂಚಾರ ನಿಷೇಧ ವಿರೋಧಿಸಿ ಫೆ.9ಕ್ಕೆ ಪ್ರತಿಭಟನೆ
ಬೆಂಗಳೂರು, ಫೆ.6: ನಗರದಲ್ಲಿ ಟ್ರಾಕ್ಟರ್ ಸಂಚಾರ ನಿಷೇಧಿಸಿರುವ ಸರಕಾರದ ಅವೈಜ್ಞಾನಿಕ ಕ್ರಮವನ್ನು ಖಂಡಿಸಿ ಫೆ.9ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಸೇರಿ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಟ್ರ್ಯಾಕ್ಟರ್ ಮಾಲಕರ ಘಟಕದ ಅಧ್ಯಕ್ಷ ಲಿಂಗಪ್ಪ ಹುಲ್ಲೂರು ಮಾತನಾಡಿ, ರಾಜ್ಯದ ಹಿಂದುಳಿದ ಭಾಗದಿಂದ ನಗರಕ್ಕೆ ವಲಸೆ ಬಂದವರು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಮಂದಿ ಜೀವನೋಪಾಯಕ್ಕಾಗಿ ಟ್ರ್ಯಾಕ್ಟರ್ ಅನ್ನು ಅವಲಂಭಿಸಿದ್ದಾರೆ. ಆದರೆ ಸರಕಾರ ನಗರದಲ್ಲಿ ಟ್ರ್ಯಾಕ್ಟರ್ ಸಂಚಾರವನ್ನು ನಿಷೇಧಿಸಿದರೆ, ಕೂಲಿಕಾರರು ಅತಂತ್ರರಾಗುತ್ತಾರೆ ಎಂದು ತಿಳಿಸಿದರು.
ನಗರದಲ್ಲಿ 40 ಸಾವಿರಕ್ಕೂ ಅಧಿಕ ಟ್ರಾಕ್ಟರ್ ಗಳು ಕೃಷಿ ಉತ್ಪನ, ಕಟ್ಟಡ ತ್ಯಾಜ್ಯ ಹಾಗೂ ಸರಕು ಸಾಗಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಈ ಟ್ರಾಕ್ಟರ್ ಗಳು ಪ್ರಮುಖ ಪಾತ್ರವಹಿಸಿವೆ. ಪ್ರತಿ ಟ್ರಾಕ್ಟರ್‍ಗೆ ಒಬ್ಬ ಚಾಲಕ, ಒಬ್ಬ ಸಹಾಯಕ ಹಾಗೂ ಇಬ್ಬರು ಕೂಲಿ ಆಳು ಸಹಿತ ನಾಲ್ವರಿಗೆ ಕೆಲಸ ಅಂದರೆ 40 ಸಾವಿರ ಟ್ರಾಕ್ಟರ್‍ನಿಂದ 1.60ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುತ್ತಿದೆ. ಏಕಾಏಕಿ ಈ ಟ್ರಾಕ್ಟರ್ ನಿಷೇಧಿಸಿರುವುದರಿಂದ ಅಷ್ಟು ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದರು.
ನಿಲುಗಡೆ ಸೌಲಭ್ಯವಿಲ್ಲದಿದ್ದರೂ, ಮನೆಯಲ್ಲಿ ಮೂರು ನಾಲ್ಕು ಕಾರುಗಳು ಖರೀದಿಸಿ ಅದನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲುಗಡೆ ಮಾಡಿ, ಒಂದು ಕಾರಿನಲ್ಲಿ ಒಬ್ಬೊಬ್ಬರೆ ಸಂಚರಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಮೂಲ ಕಾರಣವಾಗಿದೆ. ಬೆಂಗಳೂರು ನಗರ ಸಂಚಾರಿ ಪೊಲೀಸರು ಮೊದಲು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಕರುನಾಡ ಸೇವಕರು ಸಂಘಟನೆ ಅಧ್ಯಕ್ಷ ರೂಪೇಶ್ ರಾಜಣ್ಣ, ಗುರು ದೊಡ್ಡಮನಿ, ನಾಗ ಚೌಕನಹಳ್ಳಿ ಉಪಸ್ಥಿತರಿದ್ದರು.