ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ: ತನಿಖೆ ಚುರುಕು; ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಲಭ್ಯ
ಕಾಪು: ಪಾಂಗಾಳದ ಶರತ್ ಶೆಟ್ಟಿ(38) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈ ಕುರಿತು ದೊರೆತ ಕೆಲವೊಂದು ಮಹತ್ವ ಸುಳುವಿನ ಆಧಾರದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಉಡುಪಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್ಪಿ ಅರವಿಂದ್ ಕುಲಗುಜ್ಜಿ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಇದರಲ್ಲಿ ಒಂದು ತಂಡ ಆರೋಪಿಗಳ ಸುಳುವಿನ ಆಧಾರದಲ್ಲಿ ದ.ಕ. ಜಿಲ್ಲೆಗೆ ತೆರಳಿದೆ ಎನ್ನಲಾಗಿದೆ.
ಒಂದು ತಂಡ ಮೃತ ಶರತ್ ಶೆಟ್ಟಿ ಮೊಬೈಲ್ ಹಾಗೂ ಸಿಸಿಟಿವಿ ವಿಡಿಯೋ ಆಧಾರದಲ್ಲಿ ಉಡುಪಿಯಲ್ಲಿ ಮಾಹಿತಿ ಕಳೆಹಾಕುತ್ತಿದೆ. ಅಲ್ಲದೆ ಕೊಲೆಗೆ ಸಂಬಂಧಿಸಿ ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶರತ್ ಶೆಟ್ಟಿ ಭೂ ವ್ಯವಹಾರ ನಡೆಸಿಕೊಂಡಿರುವುದರಿಂದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
‘ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರೆದಿದ್ದು, ಕೆಲವು ಮಹತ್ವದ ಸುಳುವಿನ ಆಧಾರದಲ್ಲಿ ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.