ಮಂಗಳೂರು: ವಿಷಾಹಾರ ಸೇವಿಸಿ 130ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಮಂಗಳೂರು: ನಗರದ ಸಿಟಿ ಆಸ್ಪತ್ರೆಯ ಅಧೀನದಲ್ಲಿರುವ ನರ್ಸಿಂಗ್ ಕಾಲೇಜಿಗೆ ಸೇರಿದ ಹಾಸ್ಟೆಲೊಂದರಲ್ಲಿ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡರೆನ್ನಲಾದ 130ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಸೋಮವಾರ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದ.ಕ. ಜಿಲ್ಲೆ ಹಾಗೂ ಕೇರಳ ಮತ್ತಿತರ ಕಡೆಯ ವಿದ್ಯಾರ್ಥಿನಿಯರೂ ಅಸ್ವಸ್ಥಗೊಂಡಿದ್ದಾರೆ. ಕೆಲವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಇನ್ನು ಕೆಲವರನ್ನು ‘ಬೆಡ್’ಗಳ ಕೊರತೆಯಿಂದ ಹೊರವಲಯದ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ದಿನದಿಂದ ಕಲುಷಿತ ನೀರು ಮತ್ತು ಆಹಾರ ಸೇವಿಸಿದ ಬಳಿಕ ಆರೋಗ್ಯದ ಸಮಸ್ಯೆ ಕಾಡಿದೆ. ಕೆಲವರಿಗೆ ಹೊಟ್ಟೆನೋವು, ವಾಂತಿ, ಭೇದಿ ಆಗಿದ್ದು, ಸೋಮವಾರ ಮುಂಜಾವದಿಂದಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜೆಯ ವೇಳೆ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿಯರು ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿಯು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಕಾರಣ ಇತರ ವಿದ್ಯಾರ್ಥಿಗಳು ಮತ್ತು ಪೋಷಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸೋಮವಾರ ರಾತ್ರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸೋಮವಾರ ಮುಂಜಾವ ಸುಮಾರು 2 ಗಂಟೆಗೆ ಕೆಲವು ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು, ಭೇದಿ ಶುರುವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನದ ಬಳಿಕ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚಾಯಿತು. ಅವರನ್ನೆಲ್ಲಾ ನಗರದ ಎಜೆ, ಕೆಎಂಸಿ, ಫಾದರ್ ಮುಲ್ಲರ್ ಸಹಿತ ಕೆಲವು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.