ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆ ಗೌರಿ ನೇಮಕಾತಿ ಪ್ರಶ್ನಿಸುವ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ನಿರ್ಧಾರ
ಹೊಸದಿಲ್ಲಿ, ಫೆ. 6: ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶೆಯಾಗಿ ವಕೀಲೆ ಲೇಕ್ಷ್ಮಣಾ ಚಂದ್ರ ವಿಕ್ಟೋರಿಯ ಗೌರಿಯ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ಕೋರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮರುಪರಿಶೀಲಿಸಿ, ವಿಚಾರಣೆಯ ದಿನಾಂಕವನ್ನು ಫೆಬ್ರವರಿ 10ರಿಂದ ಫೆಬ್ರವರಿ 7ಕ್ಕೆ ಹಿಂದೂಡಿದೆ.
ಹಿರಿಯ ವಕೀಲ ರಾಜು ರಾಮಚಂದ್ರನ್ ಅರ್ಜಿಗೆ ಸಂಬಂಧಿಸಿದ ಹೊಸ ಬೆಳವಣಿಗೆಯನ್ನು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದಿರಿಸಿದಾಗ, ನ್ಯಾಯಪೀಠ ಅದನ್ನು ಪರಿಗಣಿಸಿತು. ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ಗೌರಿಯನ್ನು ನೇಮಕಾತಿಗೊಳಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ ಎನ್ನುವುದನ್ನು ವಕೀಲ ರಾಜು ರಾಮಚಂದ್ರನ್ ನ್ಯಾಯಪೀಠದ ಗಮನಕ್ಕೆ ತಂದರು.
‘‘ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಯನ್ನು ನಾವು ಗಮನಿಸಿದ್ದೇವೆ ಹಾಗೂ ಅರ್ಜಿಯ ವಿಚಾರಣೆಯನ್ನು ನಾವು ನಾಳೆ (ಮಂಗಳವಾರ) ಬೆಳಗ್ಗೆ ಕೈಗೆತ್ತಿಕೊಳ್ಳುತ್ತೇವೆ. ಅದಕ್ಕಾಗಿ ನಾವು ಪೀಠವೊಂದನ್ನು ರಚಿಸುತ್ತೇವೆ’’ ಎಂದು ನ್ಯಾಯಪೀಠವು ಹೇಳಿತು.
ಇದಕ್ಕೂ ಮೊದಲು, ಗೌರಿಯ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 10ರಂದು ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಸೋಮವಾರ ಬೆಳಗ್ಗಿನ ಅವಧಿಯ ವಿಚಾರಣೆಯ ವೇಳೆ ಅದು ಈ ನಿರ್ಧಾರ ತೆಗೆದುಕೊಂಡಿತ್ತು.
ಆದರೆ, ಬಳಿಕ ಅಲಹಾಬಾದ್, ಕರ್ನಾಟಕ ಮತ್ತು ಮದ್ರಾಸ್ ಹೈಕೋರ್ಟ್‌ಗಳ ನ್ಯಾಯಾಧೀಶರಾಗಿ 11 ವಕೀಲರು ಮತ್ತು ಇಬ್ಬರು ನ್ಯಾಯಾಧೀಶರನ್ನು ನೇಮಕಗೊಳಿಸಿ ಕೇಂದ್ರ ಸರಕಾರವು ಅಧಿಸೂಚನೆ ಹೊರಡಿಸಿತು.
ಈ ಪೈಕಿ ಒಬ್ಬರು ಮದ್ರಾಸ್ ಹೈಕೋರ್ಟ್‌ಗೆ ನೇಮಕಗೊಂಡಿರುವ ಲೇಕ್ಷ್ಮಣಾ ಚಂದ್ರ ವಿಕ್ಟೋರಿಯ ಗೌರಿ. ಆರೆಸ್ಸೆಸ್ ಮತ್ತು ಬಿಜೆಪಿಯೊಂದಿಗೆ ಅವರು ಹೊಂದಿದ್ದಾರೆ ಎನ್ನುವ ನಂಟು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಲೇಕ್ಷ್ಮಣಾ ಚಂದ್ರ ವಿಕ್ಟೋರಿಯ ಗೌರಿ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿದ್ದರು. ಬಿಜೆಪಿ ಮತ್ತು ಆರೆಸ್ಸೆಸ್ ನೊಂದಿಗೆ ಅವರು ಹೊಂದಿದ್ದಾರೆನ್ನಲಾಗಿರುವ ನಂಟು ಬಹಿರಂಗಗೊಂಡ ಬಳಿಕ, ಅವರನ್ನುಯ ಮದರಾಸು ಹೈಕೋರ್ಟ್‌ನ ನ್ಯಾಯಾಧೀಶೆಯಾಗಿ ನೇಮಿಸುವ ಪ್ರಸ್ತಾವವು ಭಾರೀ ವಿವಾದಕ್ಕೆ ಕಾರಣವಾಗಿದೆ.
ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಅವರು ನೀಡಿದ್ದಾರೆನ್ನಲಾಗಿರುವ ಹಲವು ಹೇಳಿಕೆಗಳು ಈಗ ಮುನ್ನೆಲೆಗೆ ಬಂದಿವೆ.
ಮುಖ್ಯ ನ್ಯಾಯಾಧೀಶ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತು ಕೆ.ಎಮ್. ಜೋಸೆಫ್ ಅವರನ್ನೊಳಗೊಂಡ ಕೊಲೀಜಿಯಮ್ ಜನವರಿ 17ರಂದು ಗೌರಿ ಮತ್ತು ಇತರ ನಾಲ್ವರು ವಕೀಲರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ಶಿಫಾರಸು ಮಾಡಿತ್ತು.
ರಾಷ್ಟ್ರಪತಿ, ಕೊಲೀಜಿಯಮ್‌ಗೂ ಮನವಿ ಸಲ್ಲಿಸಿದ್ದ ವಕೀಲರು
ವಕೀಲೆ ಗೌರಿಯನ್ನು ಮದರಾಸು ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸುವ ಸುಪ್ರೀಂ ಕೋರ್ಟ್ ಕೊಲೀಜಿಯಮ್‌ನ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮದರಾಸು ಹೈಕೋರ್ಟ್ ವಕೀಲರ ಸಂಘದ ಸದಸ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸುಪ್ರೀಂ ಕೋರ್ಟ್ ಕೊಲೀಜಿಯಮ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ನೇಮಕಾತಿಯು ನ್ಯಾಯಾಂಗದ ಸ್ವಾತಂತ್ರಕ್ಕೆ ಧಕ್ಕೆ ತರುತ್ತದೆ ಎಂಬುದಾಗಿ ವಕೀಲರು ತಮ್ಮ ಅರ್ಜಿಗಳಲ್ಲಿ ವಾದಿಸಿದ್ದರು.
ತಾನು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ಎನ್ನುವುದನ್ನು ಸ್ವತಃ ಗೌರಿಯೇ ಒಪ್ಪಿಕೊಂಡಿದ್ದಾರೆ ಎಂದು 22 ವಕೀಲರು ಸಹಿ ಹಾಕಿರುವ ಅರ್ಜಿ ಹೇಳಿದೆ. ಹಿರಿಯ ವಕೀಲರಾದ ಎನ್.ಜಿ. ಆರ್. ಪ್ರಸಾದ್, ಆರ್. ವೈಗೈ, ಆನಾ ಮ್ಯಾಥ್ಯೂ, ಡಿ. ನಾಗಸೈಲಾ ಮತ್ತು ಸುಧಾ ರಾಮಲಿಂಗಮ್ ಮುಂತಾದ ಹಿರಿಯ ವಕೀಲರು ಅರ್ಜಿಗೆ ಸಹಿ ಹಾಕಿದ್ದಾರೆ.