ಭೂಕಂಪದ ಅವಶೇಷಗಳಲ್ಲಿ ಜೀವಂತವಾಗಿ ಪತ್ತೆಯಾದ ಘಾನಾ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು

ಅಕ್ರಾ( ಘಾನಾ): ಟರ್ಕಿ ಹಾಗೂ ನೆರೆಯ ಸಿರಿಯಾದಲ್ಲಿ 5,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಭೂಕಂಪದ ಅವಶೇಷಗಳಲ್ಲಿ ಘಾನಾದ ರಾಷ್ಟ್ರೀಯ ಆಟಗಾರ ಮತ್ತು ಮಾಜಿ ನ್ಯೂಕ್ಯಾಸಲ್ ಮಿಡ್‌ಫೀಲ್ಡರ್ ಕ್ರಿಶ್ಚಿಯನ್ ಅಟ್ಸು ಅವರು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಟರ್ಕಿಯಲ್ಲಿ ಘಾನಾದ ರಾಯಭಾರಿ ಇಂದು ತಿಳಿಸಿದ್ದಾರೆ.
31 ರ ಹರೆಯದ ಕ್ರಿಶ್ಚಿಯನ್ ಅಟ್ಸು ಅವರು ಸೆಪ್ಟೆಂಬರ್‌ನಲ್ಲಿ ಟರ್ಕಿಶ್ ಸೂಪರ್ ಲಿಗ್ ತಂಡ ಹಟಾಯ ಸ್ಪೋರ್ ಸೇರಿದ್ದರು, ಸೋಮವಾರದ ಬೃಹತ್ ಭೂಕಂಪದ ಕೇಂದ್ರಬಿಂದುವಿನ ಬಳಿ ದಕ್ಷಿಣ ಪ್ರಾಂತ್ಯದ ಹಟಾಯ್‌ನಲ್ಲಿ ಅವರು ನೆಲೆಸಿದ್ದರು.
"ನನಗೆ ಒಳ್ಳೆಯ ಸುದ್ದಿ ಬಂದಿದೆ. ಕ್ರಿಶ್ಚಿಯನ್ ಅಟ್ಸು ಹಟಾಯ್ ಯಲ್ಲಿ ಕಂಡುಬಂದಿದ್ದಾರೆ ಎಂಬ ಮಾಹಿತಿಯನ್ನು ಘಾನಾ ಅಸೋಸಿಯೇಶನ್‌ನ ಅಧ್ಯಕ್ಷರಿಂದ ನಾನು ಪಡೆಯುತ್ತಿದ್ದೇನೆ" ಎಂದು ಫ್ರಾನ್ಸಿಸ್ಕಾ ಆಶಿಟೆಯ್-ಒಡುಂಟನ್ ಅವರು ಅಕ್ರಾ ಮೂಲದ ಅಸಾಸೆ ರೇಡಿಯೊಗೆ ತಿಳಿಸಿದರು.
ಅಟ್ಸು ಪರಿಸ್ಥಿತಿಯ ಬಗ್ಗೆ ರಾಯಭಾರಿ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
2019ರಲ್ಲಿ ಘಾನಾ ಪರ ಕೊನೆಯ ಪಂದ್ಯ ಆಡಿದ್ದ ಅಟ್ಸು ಅಧಿಕೃತವಾಗಿ ಫುಟ್ಬಾಲ್ ನಿಂದ ನಿವೃತ್ತಿಯಾಗಿಲ್ಲ.