ಮಣಿಪಾಲ: ಫೆ.12ರಂದು 5ನೇ ಮಣಿಪಾಲ ಮ್ಯಾರಥಾನ್

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಬೆಂಗಳೂರಿನ ಎನ್‌ಇಬಿ ಸ್ಪೋರ್ಟ್ಸ್‌ನ ಸಹಯೋಗದೊಂದಿಗೆ 5ನೇ ಮಣಿಪಾಲ ಮ್ಯಾರಾಥಾನ್‌ನ್ನು ಇದೇ ಫೆ.12ರಂದು ರವಿವಾರ ಆಯೋಜಿಸಿದೆ.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಮ್ಯಾರಥಾನ್ ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಕೆ.ರಘುಪತಿ ಭಟ್ ಅವರು ಇಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ವರ್ಷದ ಮ್ಯಾರಥಾನ್‌ನಲ್ಲಿ ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದಲ್ಲದೇ, ಅವರ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಂಗ್ರಹದ ಗುರಿಯನ್ನು ಹೊಂದಿದ್ದೇವೆ ಎಂದರು.
ಒಟ್ಟು ಐದು ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ. ಪೂರ್ಣ ಮ್ಯಾರಥಾನ್ (42ಕಿ.ಮೀ.), ಹಾಫ್ ಮ್ಯಾರಥಾನ್ (21ಕಿ.ಮೀ.) ಅಲ್ಲದೇ 10ಕಿ.ಮೀ., 5ಕಿ.ಮೀ.(ಜಿಲ್ಲಾ ಪೊಲೀಸರಿಂದ ಮಾದಕ ವ್ಯಸನ ವಿರುದ್ಧ ಅರಿವು ಓಟ) ಹಾಗೂ 3ಕಿ.ಮೀ. ಓಟ (ರೋಟರಿಯ ಮನೋರಂಜನಾ ಓಟ) ವನ್ನು ಒಳಗೊಂಡಿರುತ್ತದೆ. ಈ ವರ್ಷದ ಮ್ಯಾರಥಾನ್‌ನಲ್ಲಿ ಹೆಚ್ಚುವರಿ ಯಾಗಿ ವಿಶೇಷ ಚೇತನರಿಗಾಗಿ ವೀಲ್‌ಚೇರ್‌ನಲ್ಲಿ ಓಡುವ ವಿಶೇಷ ವಿಭಾಗವನ್ನು ಸೇರಿಸಲಾಗಿದೆ ಎಂದರು.
42ಕಿ.ಮೀ. ಮ್ಯಾರಥಾನ್‌ಗೆ ದೇಶ-ವಿದೇಶಗಳ ವೃತ್ತಿಪರ ಓಟಗಾರರು ಸೇರಿದಂತೆ ಈವರೆಗೆ ಸುಮಾರು 200 ಮಂದಿ ಹೆಸರು ನೊಂದಾಯಿಸಿಕೊಂಡಿ ದ್ದಾರೆ. ಹಾಫ್ ಮ್ಯಾರಥಾನ್‌ಗೆ 1000 ಮಂದಿ ಹೆಸರು ನೀಡಿದ್ದು, ಒಟ್ಟಾರೆಯಾಗಿ 10000 ಮಂದಿ ಮಣಿಪಾಲ ಮ್ಯಾರಥಾನ್‌ನಲ್ಲಿ ಓಡುವ ನಿರೀಕ್ಷೆ ಹೊಂದಿದ್ದೇವೆ ಎಂದು ಡಾ.ಬಲ್ಲಾಳ್ ತಿಳಿಸಿದರು.
ಪೂರ್ಣ ಮ್ಯಾರಥಾನ್ ಓಟ ಫೆ.12ರ ಮುಂಜಾನೆ 5:00ಗಂಟೆಗೆ ಮಾಹೆಯ ಆಡಳಿತ ಕಟ್ಟಡ ಮುಂಭಾಗದಿಂದ ಪ್ರಾರಂಭಗೊಳ್ಳಲಿದೆ. ಉಳಿದ ವಿಭಾಗಗಳ ಓಟಗಳೂ ಅಲ್ಲಿಂದಲೇ ಪ್ರಾರಂಭಗೊಂಡು ಅಲ್ಲೇ ಮುಕ್ತಾಯ ಗೊಳ್ಳುತ್ತದೆ. ಉಡುಪಿ ಜಿಲ್ಲಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ (ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗ) 3ಕಿ.ಮೀ. ಓಟವನ್ನು ನಡೆಸಲಾಗುವುದು. ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಗಳನ್ನು ನೀಡಲಾಗುವುದು ಎಂದು ರಘುಪತಿ ಭಟ್ ತಿಳಿಸಿದರು.
ಐಎಎಎಫ್ ಹಾಗೂ ಎಎಂಐಎಸ್‌ನಿಂದ ಮಾನ್ಯತೆ ಪಡೆದಿರುವ ಮಣಿಪಾಲ ಮ್ಯಾರಥಾನ್‌ನಿಂದ ಸ್ಪರ್ಧಿಸುವ ಅಂತಾರಾಷ್ಟ್ರೀಯ ಸ್ಪರ್ಧಿಗಳಿಗೆ ಅಮೂಲ್ಯ ಪಾಯಿಂಟ್‌ಗಳು ದೊರೆಯುವುದರಿಂದ ವಿದೇಶಗಳಿಂದಲೂ ಬಹಳಷ್ಟು ಮಂದಿ ಸ್ಪರ್ಧಿಸುವರು. 42ಕಿ.ಮೀ. ಮ್ಯಾರಥಾನ್‌ನ ವಿಜೇತರಿಗೆ 50,000ರೂ.ಪ್ರಥಮ, 30,000ರೂ.ದ್ವಿತೀಯ ಹಾಗೂ 20,000ರೂ. ತೃತೀಯ ನಗದು ಬಹುಮಾನವಿದೆ. ಅದೇ ರೀತಿ ಹಾಫ್ ಮ್ಯಾರಥಾನ್‌ನ ವಿಜೇತರಿಗೆ ಕ್ರಮವಾಗಿ 30ಸಾವಿರ, 20ಸಾವಿರ ಹಾಗೂ 10ಸಾವಿರ ರೂ.ಬಹುಮಾನವಿದೆ. 10ಕಿ.ಮೀ. ಹಾಗೂ 5ಕಿ.ಮೀ. ಓಟದ ವಿಜೇತರಿಗೂ ಆಕರ್ಷಕ ನಗದುಬಹುಮಾನವಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಎನ್‌ಇಬಿ ಸ್ಪೋರ್ಟ್ಸ್‌ನ ನಿರ್ದೇಶಕ ನಾಗರಾಜ ಅಡಿಗ, ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ಕೆಂಪರಾಜ್ ಎಚ್.ಬಿ., ಮಾಹೆಯ ಕ್ರೀಡಾ ಕೌನ್ಸಿಲ್‌ನ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಅಸೋಸಿಯೇಷನ್‌ನ ಕಾರ್ಯದರ್ಶಿ ದಿನೇಶ್ ಕುಮಾರ್, ಐಸಿಐಸಿಐ ಬ್ಯಾಂಕಿನ ಮಧು ದೀಕ್ಷಿತ್ ಉಪಸ್ಥಿತರಿದ್ದರು.