ಟರ್ಕಿ ಭೂಕಂಪ: ಅವಶೇಷಗಳಡಿ ತನ್ನ ಪುಟ್ಟ ಸೋದರನನ್ನು ರಕ್ಷಿಸಿದ ಏಳರ ಬಾಲೆ
ನೆಟ್ಟಿಗರ ಹೃದಯಗಳನ್ನು ಕರಗಿಸಿದ ಚಿತ್ರ

ಹೊಸದಿಲ್ಲಿ: ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ ಭೀಕರ ಭೂಕಂಪಗಳ ಬಳಿಕ ಅವಶೇಷಗಳಡಿ ಸಿಕ್ಕಿಕೊಂಡಿದ್ದ ಏಳರ ಹರೆಯದ ಬಾಲಕಿ ತನ್ನೊಂದಿಗಿದ್ದ ಪುಟ್ಟ ಸೋದರನ ತಲೆಗೆ ಯಾವುದೇ ಅಪಾಯವಾಗದಂತೆ ತನ್ನ ಕೈಗಳಿಂದ ಅದನ್ನು ಮುಚ್ಚಿರುವ ಚಿತ್ರವೊಂದು ಆನ್‍ಲೈನ್‍ನಲ್ಲಿ ಹೃದಯಗಳನ್ನು ಕರಗಿಸಿದೆ. ಈ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ವಿಶ್ವಸಂಸ್ಥೆ ಪ್ರತಿನಿಧಿ ಮುಹಮ್ಮದ್ ಸಫಾ ಅವರು, ಈ ಮಕ್ಕಳು 17 ಗಂಟೆಗಳ ಕಾಲ ಅವಶೇಷಗಳಡಿ ಸಿಕ್ಕಿಕೊಂಡಿದ್ದು, ಕೊನೆಗೂ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ತಿಳಿಸಿದ್ದಾರೆ.
‘ಈ ಚಿತ್ರವನ್ನು ಯಾರೂ ಶೇರ್ ಮಾಡಿಕೊಳ್ಳುತ್ತಿಲ್ಲ ಎನ್ನುವುದನ್ನು ನಾನು ನೋಡುತ್ತಿದ್ದೇನೆ. ಬಾಲಕಿ ಸತ್ತಿದ್ದರೆ ಪ್ರತಿಯೊಬ್ಬರೂ ಅದನ್ನು ಶೇರ್ ಮಾಡಿಕೊಳ್ಳುತ್ತಿದ್ದರು.ಧನಾತ್ಮಕತೆಯನ್ನು ಶೇರ್ ಮಾಡಿಕೊಳ್ಳಿ’ ಎಂದು ಸಫಾ ಟ್ವೀಟಿಸಿದ್ದಾರೆ.
ಛಾಯಾಚಿತ್ರವು ನೆಟ್ಟಿಗರಲ್ಲಿ ಭಾವೋದ್ವೇಗವನ್ನುಂಟು ಮಾಡಿದೆ. ಸಂಕಟದ ಸ್ಥಿತಿಯಲ್ಲಿಯೂ ತನ್ನ ಸೋದರನ ರಕ್ಷಣೆಗಾಗಿ ಬಾಲಕಿಯ ಕಾಳಜಿಯನ್ನು ಹಲವರು ಪ್ರಶಂಸಿಸಿದ್ದಾರೆ.
‘ಪವಾಡಗಳು ಸಂಭವಿಸುತ್ತವೆ. ಎಂತಹ ಮಹಾನ್ ಸೋದರಿ? ಅಂತಹ ಒತ್ತಡದ ಸಂದರ್ಭದಲ್ಲಿಯೂ ಪ್ರೀತಿಯಿಂದ ತಮ್ಮನನ್ನು ರಕ್ಷಿಸಿದ್ದಾಳೆ. ಈಗಲೂ ಅವಶೇಷಗಳಡಿ ಸಿಕ್ಕಿಕೊಂಡಿರುವ ಎಲ್ಲರೂ ಸುರಕ್ಷಿತವಾಗಿ ಹೊರಬರುತ್ತಾರೆಂದು ಆಶಿಸಿದ್ದೇನೆ. ದಣಿವರಿಯದೆ ಕೆಲಸ ಮಾಡುತ್ತಿರುವ ರಕ್ಷಣಾ ತಂಡಗಳಿಗೆ ನಮನಗಳು’ ಎಂದು ಓರ್ವ ಟ್ವಿಟರ್ ಬಳಕೆದಾರರು ಟ್ವೀಟಿಸಿದ್ದರೆ, ‘ಓಹ್, ಅವಳನ್ನು ಆಶೀರ್ವದಿಸಿ. ಮಕ್ಕಳ ಪ್ರೀತಿ ಮತ್ತು ಲವಲವಿಕೆ ನನ್ನನ್ನು ರೋದಿಸುವಂತೆ ಮಾಡಿದೆ’ ಎಂದು ಇನ್ನೋರ್ವರು ಬರೆದಿದ್ದಾರೆ.
‘ಓಹ್, ಆಕೆ ಪುಟ್ಟ ಹೀರೊ’ ಎಂದು ಮತ್ತೋರ್ವ ಬಳಕೆದಾರರು ಹೊಗಳಿದ್ದಾರೆ.
ಟರ್ಕಿ ಮತ್ತು ಸಿರಿಯಾಗಳನ್ನು ನಡುಗಿಸಿದ ಭೀಕರ ಭೂಕಂಪದಲ್ಲಿ ಸುಮಾರು 5,103 ಜನರು ಮೃತಪಟ್ಟಿದ್ದು,ಸಾವಿರಾರು ಜನರು ಗಾಯಗೊಂಡಿದ್ದಾರೆ.
The 7 year old girl who kept her hand on her little brother's head to protect him while they were under the rubble for 17 hours has made it safely. I see no one sharing. If she were dead, everyone would share! Share positivity... pic.twitter.com/J2sU5A5uvO
— Mohamad Safa (@mhdksafa) February 7, 2023