ಉಡುಪಿ: ನಿವೃತ್ತ ಗ್ರಂಥಾಲಯಾಧಿಕಾರಿ ವೆಂಕಟೇಶ್‌ಗೆ ಬೀಳ್ಕೊಡುಗೆ
ಉಡುಪಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕರಾಗಿ ಹಾಗೂ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ರಾಜ್ಯದ ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿರುವ ವೆಂಕಟೇಶ್ ಸಿ.ಜೆ. ಇವರಿಗೆ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಬೀಳ್ಕೊಡುಗೆ ಹಾಗೂ ಗೌರವಾರ್ಪಣೆ ಸಮಾರಂಭ ಇತ್ತೀಚೆಗೆ ನಡೆಯಿತು.
ವೆಂಕಟೇಶ್ ಅವರು ಬೆಂಗಳೂರಿನ ಕೇಂದ್ರ ವಲಯದ ನಗರ ಕೇಂದ್ರ ಗ್ರಂಥಾಲಯದಲ್ಲಿ ಉಪನಿರ್ದೇಶಕರಾಗಿ ಸೇವಾ ನಿವೃತ್ತರಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ಇವರು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಹಾಗೂ ಅವರ ನಿವೃತ್ತ ಜೀವನಕ್ಕೆ ಶುಭಕೋರಿ ಉಡುಪಿ ಕೇಂದ್ರ ಗ್ರಂಥಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮ ಆಯೋಜಿಸಿದ್ದರು.
ಅಜ್ಜರಕಾಡಿನಲ್ಲಿರುವ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾ ಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಗೌರವ ಸಮರ್ಪಣೆ ಸಮಾರಂಭ ನಡೆಯಿತು. ವೆಂಕಟೇಶ ಸಿ.ಜೆ ಹಾಗೂ ಪತ್ನಿ ಪಾರ್ವತಿ ಇವರನ್ನು ಸನ್ಮಾನಿಸಲಾಯಿತು.
ಗ್ರಂಥಾಲಯ ಸಹಾಯಕಿ ಸುನೀತ ಬಿ.ಎಸ್. ಪ್ರಾರ್ಥಿಸಿ, ಪ್ರಥಮ ದರ್ಜೆ ಸಹಾಯಕಿ ಶಕುಂತಳ ಕುಂದರ್ ವಂದಿಸಿದರು. ಗ್ರಂಥಪಾಲಕಿ ರಂಜಿತ ಸಿ. ಕಾರ್ಯಕ್ರಮ ನಿರೂಪಿಸಿದರು.