ಮದ್ರಸಾ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಪರೀಕ್ಷೆಗೆ ತರಬೇತಿ: ಇಫ್ತಿಖಾರ್ ಅಹ್ಮದ್ ಖಾಸ್ಮಿ

ಬೆಂಗಳೂರು, ಫೆ. 8: ಜಮೀಯತ್ ಉಲಮಾ ಎ ಹಿಂದ್ ವತಿಯಿಂದ ಇಡೀ ದೇಶದಲ್ಲಿ ‘ಜಮೀಯತ್ ಒಪನ್ ಸ್ಕೂಲ್’ ಮೂಲಕ ಮದ್ರಸಾ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ತರಬೇತಿ ನೀಡಲಾಗುತ್ತಿದೆ ಎಂದು ಜಮೀಯತ್ ಉಲಮಾ ಎ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದರು.
ಬುಧವಾರ ಶಿವಾಜಿನಗರದ ಟಾಸ್ಕರ್ ಟೌನ್‍ನಲ್ಲಿರುವ ದಿ ಅಲ್ ಖಾಸೀಂ ಇನ್ಸ್‍ಟಿಟ್ಯೂಟ್‍ನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ 16 ರಾಜ್ಯಗಳ ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ಲೌಕಿಕ ಶಿಕ್ಷಣವನ್ನು ನೀಡಲು ಕೇಂದ್ರ ಸರಕಾರದ ‘ದಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಒಪನ್ ಸ್ಕೂಲಿಂಗ್(ಎನ್‍ಐಒಎಸ್)’ ಜೊತೆ ಒಡಂಬಡಿಕೆ ಮಾಡಿಕೊಂಡು ಜಮೀಯತ್ ಒಪನ್ ಸ್ಕೂಲ್ ಕಾರ್ಯನಿರ್ವಹಿಸುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 1400 ವಿದ್ಯಾರ್ಥಿಗಳು ಜಮೀಯತ್ ಒಪನ್ ಸ್ಕೂಲ್ ಮೂಲಕ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಜಮೀಯತ್ ಉಲಮಾ ಎ ಹಿಂದ್ ಮಾಡಿರುವ ಈ ಮಾದರಿ ಕಾರ್ಯಕ್ಕೆ ಮದ್ರಸಾಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸುತ್ತಿವೆ ಎಂದು ಅವರು ಹೇಳಿದರು.
ನಾಸಿಹ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ಜಮೀಯತ್ ಒಪನ್ ಸ್ಕೂಲ್‍ಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ನಾಸಿಹ್ ಪಬ್ಲಿಕ್ ಶಾಲೆಗೆ ಎನ್‍ಐಒಎಸ್ ಕೇಂದ್ರ ಮಂಜೂರಾಗಿದ್ದು, ಇದರಲ್ಲಿ 500 ಉರ್ದು ಹಾಗೂ 500 ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೆ 650ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ನೋಂದಣಿಯಾಗಿದೆ ಎಂದರು.
ಮುಫ್ತಿ ಶಂಸುದ್ದೀನ್ ಬಜಲಿ ಖಾಸೀಂ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ಇಡೀ ದೇಶದಲ್ಲಿ ಸುಮಾರು 50 ಸಾವಿರ ಮದ್ರಸಾ ವಿದ್ಯಾರ್ಥಿಗಳನ್ನು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವ ಲಕ್ಷ್ಯ ಹೊಂದಿದ್ದೇವೆ. ಈ ಪ್ರಯತ್ನದಿಂದಾಗಿ ಕೇವಲ ಮದ್ರಸಾ ವಿದ್ಯಾರ್ಥಿಗಳಷ್ಟೆ ಅಲ್ಲ, ಶಾಲೆಯನ್ನು ಅರ್ಧದಲ್ಲೆ ಬಿಟ್ಟಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಮದ್ರಸಾದಲ್ಲಿ ತರಬೇತಿ ನೀಡಿ, ಎಸೆಸೆಲ್ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದೇವೆ ಎಂದರು.
ದಿ ಖಾಸೀಂ ಇನ್ಸ್‍ಟಿಟ್ಯೂಟ್‍ನ ಆಡಳಿತಾಧಿಕಾರಿ ಮೌಲಾನ ಮುಹಮ್ಮದ್ ಉಮರ್ ಮಾತನಾಡಿ, ಜಮೀಯತ್ ಒಪನ್ ಸ್ಕೂಲ್ ಬಗ್ಗೆ ಮದ್ರಸಾಗಳ ಮುಖ್ಯಸ್ಥರಿಗೆ ಪ್ರಾತ್ಯಕ್ಷಿಕೆ ನೀಡುತ್ತೇವೆ. ಉರ್ದು ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ನೀಡುವ ಶಿಕ್ಷಣದಲ್ಲಿ 35 ಅಧ್ಯಯನ ವಿಷಯಗಳಿವೆ. ಈ ಪೈಕಿ ಉರ್ದು. ಅರೇಬಿಕ್, ಸೈಕಾಲಜಿ, ಬಿಜಿನೆಸ್ ಸ್ಟಡೀಸ್, ಬೇಸಿಕ್ ಕಂಪ್ಯೂಟರ್ ಹಾಗೂ ಇಂಡಿಯನ್ ಕಲ್ಚರ್ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದರ ಜೊತೆಗೆ ಇಂಗ್ಲಿಷ್ ಕಲಿಕೆಯನ್ನು ಕಡ್ಡಾಯ ಮಾಡಿದ್ದೇವೆ ಎಂದು ಅವರು ಹೇಳಿದರು.







