ರಾಷ್ಟ್ರದ ಸಲುವಾಗಿ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧ: ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ

ಕೊಲಂಬೊ, ಫೆ.8: ದಿವಾಳಿಯ ಅಂಚಿಗೆ ತಲುಪಿರುವ ದೇಶದ ಹಿತಾಸಕ್ತಿಗೆ ಪೂರಕವಾಗುವುದಾದರೆ ಅಧಿಕಾರ ವಿಕೇಂದ್ರೀಕರಣದಲ್ಲಿ ಮುಂದುವರಿಯುವ ಜತೆಗೆ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ(Ranil Wickremesinghe) ಬುಧವಾರ ಹೇಳಿದ್ದಾರೆ.
ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, 2.9 ಶತಕೋಟಿ ಡಾಲರ್ ಮೊತ್ತದ ಐಎಂಎಫ್ (IMF)ಸಾಲ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು. ಏಕೀಕೃತ ದೇಶದೊಳಗೆ ಅಧಿಕಾರವನ್ನು ವಿನಿಯೋಗಿಸಲು ನಿರೀಕ್ಷಿಸುತ್ತೇವೆ. ಹಲವು ಸಂದರ್ಭದಲ್ಲಿ ಒತ್ತಿಹೇಳಲಾದ ಸತ್ಯವನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ. ದೇಶ ಖಂಡಿತಾ ವಿಭಜನೆಯಾಗುವುದಿಲ್ಲ ಎಂದು ವಿಕ್ರಮಸಿಂಘೆ ಹೇಳಿದ್ದಾರೆ.
ದೇಶದಲ್ಲಿ ಅಲ್ಪಸಂಖ್ಯಾತ ತಮಿಳರಿಗೆ ರಾಜಕೀಯ ಸ್ವಾಯತ್ತತೆ ಕಲ್ಪಿಸುವ ಸಂವಿಧಾನದ 13ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಅಗತ್ಯವನ್ನು ವಿಕ್ರಮಸಿಂಘೆ ಒತ್ತಿಹೇಳಿದ್ದಾರೆ. ಆದರೆ ಇದಕ್ಕೆ ದೇಶದ ಪ್ರಭಾವೀ ಬೌದ್ಧ ಸಮುದಾಯದ ಗುರುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಹೀಗೆ ಮಾಡಿದರೆ ದೇಶದ ಏಕತೆಯ ಸ್ವರೂಪಕ್ಕೆ ಸವಾಲಾಗಲಿದೆ ಎಂದಿದ್ದಾರೆ. ಶ್ರೀಲಂಕಾದ 22 ದಶಲಕ್ಷ ಜನಸಂಖ್ಯೆಯಲ್ಲಿ ಸುಮಾರು 75%ದಷ್ಟು ಸಿಂಹಳೀಯರು ಮತ್ತು ಬೌದ್ಧರಾಗಿದ್ದರೆ, 15%ದಷ್ಟು ತಮಿಳಿಯನ್ನರು. 1987ರ ಭಾರತ-ಶ್ರೀಲಂಕಾ ಒಪ್ಪಂದದ ಬಳಿಕ ರೂಪುಗೊಂಡ ಸಂವಿಧಾನದ 13ಎ ತಿದ್ದುಪಡಿಯನ್ನು ಜಾರಿಗೊಳಿಸುವಂತೆ ಭಾರತ ಒತ್ತಡ ಹೇರುತ್ತಿದೆ.
ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿದ ವಿಕ್ರಮಸಿಂಘೆ, ಶ್ರೀಲಂಕಾವು 2026ರ ಒಳಗೆ ದಿವಾಳಿತನದಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ . ಭೂತಕಾಲದ ಕಹಿ ನೆನಪಲ್ಲೇ ಕಾಲ ಕಳೆಯುವ ಬದಲು, ಭವಿಷ್ಯದ ಬಗ್ಗೆ ಯೋಚನೆ ಮಾಡೋಣ. ಪ್ರಸ್ತುತ ಬಿಕ್ಕಟ್ಟಿನಿಂದ ದೇಶ ಚೇತರಿಸಿಕೊಳ್ಳುವಂತಾಗಲು ಒಮ್ಮತದಿಂದ ಒಂದಾಗೋಣ ಮತ್ತು ಪ್ರಜಾಸತ್ತಾತ್ಮಕವಾಗಿ ಮುನ್ನಡೆಯೋಣ ಎಂದರು.
ನಾನೀಗ ತೆಗೆದುಕೊಳ್ಳುವ ಜನಪ್ರಿಯವಲ್ಲದ ಕೆಲವು ನಿರ್ಧಾರಗಳು ಮುಂಬರುವ ವರ್ಷಗಳಲ್ಲಿ ಸಕಾರಾತ್ಮಕ ಫಲಿತಾಂಶಕ್ಕೆ ಕಾರಣವಾಗಲಿದೆ. ನಾನಿಲ್ಲಿ ಇರುವುದು ಜನಪ್ರಿಯನಾಗಲು ಅಲ್ಲ. ಆರ್ಥಿಕ ಪ್ರಪಾತಕ್ಕೆ ಕುಸಿದಿರುವ ದೇಶವನ್ನು ಪುನರ್ನಿಮಾಣ ಮಾಡಲು ನಾನು ಬಯಸುತ್ತೇನೆ. ರಾಷ್ಟ್ರದ ಹಿತದೃಷ್ಟಿಯಿಂದ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾನು ಸಿದ್ಧ. ಎರಡು ಮೂರು ವರ್ಷಗಳಲ್ಲಿ ಆ ನಿರ್ಧಾರದ ಮಹತ್ವಗಳನ್ನು ಜನ ಅರಿತುಕೊಳ್ಳುತ್ತಾರೆ.
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ನಿಂದ ಸಾಲ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಚೀನಾ ಸೇರಿದಂತೆ ಶ್ರೀಲಂಕಾಕ್ಕೆ ಸಾಲ ನೀಡಿದ ದೇಶಗಳೊಂದಿಗೆ ಸಾಲ ಮರುರಚನೆ ಕುರಿತ ಮಾತುಕತೆಯೂ ಮುಂದುವರಿದಿದೆ ಎಂದವರು ಹೇಳಿದ್ದಾರೆ. ತೆರಿಗೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂತಾದ ಕಠಿಣ ಆರ್ಥಿಕ ಕ್ರಮಗಳನ್ನು ಶ್ರೀಲಂಕಾ ಸರಕಾರ ಜಾರಿಗೊಳಿಸಿದೆ. ಇಂತಹ ಕ್ರಮಗಳನ್ನು ವಿರೋಧಿಸಿ ಕಾರ್ಮಿಕ ಯೂನಿಯನ್ಗಳು ಹಾಗೂ ಸಂಘಟನೆಗಳು ದೇಶದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿವೆ.
ಸಾಲ ನೀಡಿರುವ ದೇಶಗಳೊಂದಿಗೆ ಸಾಲದ ಪುನರ್ರಚನೆ ಕುರಿತ ಮಾತುಕತೆ ಯಶಸ್ವಿಯಾದರೆ 4 ವರ್ಷದ ಅವಧಿಗೆ 9.2 ಶತಕೋಟಿ ಡಾಲರ್ ಸಾಲ ಮಂಜೂರು ಮಾಡುವುದಾಗಿ ಐಎಂಎಫ್ ಕಳೆದ ಸೆಪ್ಟಂಬರ್ನಲ್ಲಿ ಶ್ರೀಲಂಕಾಕ್ಕೆ ಭರವಸೆ ನೀಡಿತ್ತು. 2022ರ ಜೂನ್ ಅಂತ್ಯಕ್ಕೆ ಶ್ರೀಲಂಕಾವು ಸುಮಾರು 40 ಶತಕೋಟಿ ಡಾಲರ್ನಷ್ಟು ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ವಾಣಿಜ್ಯ ಸಾಲ ಪಾವತಿಸಲು ಬಾಕಿಯಿದೆ ಎಂದು ವರದಿಯಾಗಿದೆ.