ಮೂಡಿಗೆರೆ ಈ ಬಾರಿ ಯಾರ ತೆಕ್ಕೆಗೆ?
ಮೀಸಲು ಕ್ಷೇತ್ರದಲ್ಲಿ ಪಕ್ಷಗಳ ಅದೃಷ್ಟ ಪರೀಕ್ಷೆ

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂಡಿಗೆರೆ ವಿಧಾನಸಭೆ ಕ್ಷೇತ್ರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ. ಪರಿಶಿಷ್ಟ ಜಾತಿ, ಪಂಗಡದ ಜನರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದುವರೆಗಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೋಟಮ್ಮ, ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಬಿ.ಬಿ.ನಿಂಗಯ್ಯ ತಲಾ ಮೂರು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಆ ಮೂಲಕ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಭದ್ರಕೋಟೆಯಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಮೋಟಮ್ಮ ಹಾಗೂ ಜೆಡಿಎಸ್‌ನ ಬಿ.ಬಿ.ನಿಂಗಯ್ಯ ಅವರಿಗಿಂತ ಹೆಚ್ಚು ಮತಗಳನ್ನು ಪಡೆದು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭೌಗೋಳಿಕವಾಗಿ ಮೂಡಿಗೆರೆ ದೊ್ಡ ತಾಲೂಕಾಗಿದ್ದು, 29 ಗ್ರಾಮ ಪಂಚಾ ಯತ್‌ಗಳನ್ನು ಒಳ ಗೊಂ ಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಯವರೆಗೂ ವ್ಯಾಪ್ತಿ ಹೊಂದಿರುವ ಮೂಡಿಗೆರೆ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ನೆಲೆ ಕಂಡುಕೊಂಡ ಬಳಿಕ ಮೂಡಿಗೆರೆ ಕ್ಷೇತ್ರ ಬಿಜೆಪಿಯ ತೆಕ್ಕೆಗೆ ಜಾರುತ್ತಿದೆ. ಪರಿಶಿಷ್ಟರು, ಒಕ್ಕಲಿಗರ ಸಮುದಾಯದ ಮತದಾರರು ಕ್ಷೇತ್ರದ ನಿರ್ಣಾಯಕ ಮತದಾರರಾಗಿದ್ದು, ಹೊರಗಿನ ಅಭ್ಯರ್ಥಿಗಳಿಗಿಂತ ಸ್ಥಳೀಯ ಅಭ್ಯರ್ಥಿಗಳಿಗೆ ಕ್ಷೇತ್ರದ ಮತದಾರರು ಇದುವರೆಗೂ ಮಣೆ ಹಾಕುತ್ತಾ ಬಂದಿದ್ದಾರೆ.
ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳ ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಹಿಂದಿನ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಮೂರು ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಒಂದು ಬಾರಿ ಜೆಡಿಎಸ್ ತೆನೆ ಹೊತ್ತಿದೆ. ಕಾಂಗ್ರೆಸ್ ಗೆಲುವಿಗಾಗಿ ಹಾತೊರೆಯುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬೀಗುತ್ತಿರುವ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್ ತೆಕ್ಕೆಗೆ ಪಡೆಯುವ ನಿಟ್ಟಿನಲ್ಲಿ ಗೆಲ್ಲುವ ಹಾಗೂ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿರುವ ಅಭ್ಯರ್ಥಿಗಳಿಗಾಗಿ ಹುಡುಕಾಟದಲ್ಲಿದ್ದಾರೆ. ಹಾಗಾಗಿ ಈ ಬಾರಿ ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.







