ಫೆ.11,12: ರಾಷ್ಟ್ರೀಯ ಮಟ್ಟದ ಕಬಡ್ಡಿ, ಸಾಂಸ್ಕೃತಿಕ ಕಲಾ ವೈಭವ

ಉಳ್ಳಾಲ: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಗ್ರಾಮ ಇದರ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಇರಾ ಕಬಡ್ಡಿ _2023 ಹಾಗೂ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮ ಫೆಬ್ರವರಿ 11,12 ರಂದು ಇರಾ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಬೆಳ್ಳಿ ಹಬ್ಬ ಸಮಿತಿ ಸದಸ್ಯ ಸುಕೇಶ್ ಭಂಡಾರಿ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ ಫೆ.11 ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಕರಾವಳಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ. ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದು , ಹಲವಾರು ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಅದೇ ದಿನ ಸಂಜೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಫೆ.12 ರವಿವಾರ ಬೆಳಿಗ್ಗೆ 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಶಾರದಾ ಗಣಪತಿ ವಿದ್ಯಾ ಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮಭಟ್ ಉದ್ಘಾಟಿಸಲಿದ್ದಾರೆ. ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾರತ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲತೇಶ್ ಕಲ್ಲಾಡಿ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಮೇಗಿನಬೈಲು, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ರಾಜಶೇಖರ ಪೈ,ಸುಪ್ರೀತ್ ಉಪಸ್ಥಿತರಿದ್ದರು.