ಬೆಂಗಳೂರಿನಲ್ಲಿ 11 ಹೊಸ ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಫೆ.9: ನಗರದ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸದಾಗಿ ಐದು ಸಂಚಾರ ಪೊಲೀಸ್ ಠಾಣೆ ಸ್ಥಾಪಿಸಿ, ಒಬ್ಬರು ಡಿಸಿಪಿ, ಸಿಬ್ಬಂದಿ, ವಾಹನ ಹಾಗೂ ಎಲ್ಲ ಸಲಕರಣೆಗಳನ್ನು ಸರಕಾರ ಒದಗಿಸುತ್ತಿದೆ. ಅಲ್ಲದೆ, ಅಮೃತ ನಗರೋತ್ಥಾನ ಯೋಜನೆಯಡಿ 11 ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಬಿಬಿಎಂಪಿ ವತಿಯಿಂದ ಎಚ್‍ಎಎಲ್ ವಿಮಾನ ನಿಲ್ದಾಣದ ಎದುರಿರುವ ಸುರಂಜನ್ ದಾಸ್ ಜಂಕ್ಷನ್ ಬಳಿ 19 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೆಳಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಕೆಳಸೇತುವೆಯಿಂದಾಗಿ ವೈಟ್‍ಫೀಲ್ಡ್ ನಿಂದ ಎಂ.ಜಿ.ರಸ್ತೆಯ ವರಿಗೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ ಎಂದರು.
ಬೆಂಗಳೂರು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ. ಪ್ರತಿನಿತ್ಯ 5 ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ಬೆಂಗಳೂರಿನಲ್ಲಿ ಪ್ರತಿ ದಿನ 10 ಲಕ್ಷ ಜನ ಬಂದು ಹೋಗುವವರಿದ್ದಾರೆ. ಇದರ ಪರಿಹಾರಕ್ಕೆ ಹಲವಾರು ದೀರ್ಘಾವಧಿ ಮತ್ತು ಅಲ್ಪಾವಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಅಮೃತ ನಗರೋತ್ಥಾನ ಯೋಜನೆಯಡಿ 3ಸಾವಿರ ಕೋಟಿ ರೂ.ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ವಾಹನ ದಟ್ಟಣೆ ನಿಯಂತ್ರಣ: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ. ಹೊರಗಿನಿಂದ ಬರುವ ವಾಹನಗಳನ್ನು ನಿಯಂತ್ರಿಸಿ ಇಲ್ಲಿ ಹೆಚ್ಚು ದಕ್ಷತೆಯಿಂದ ಸಂಚಾರ ಪೊಲಿಸರನ್ನು ನಿಯೋಜಿಸಿ, ವಾಹನ ದಟ್ಟಣೆಯನ್ನು ಕಡಿಮೆ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಅಭಿವೃದ್ದಿಗೆ ಅನುದಾನ: ಸಬ್ ಅರ್ಬನ್ ರೈಲು ಕಾಮಗಾರಿ ಪ್ರಾರಂಭವಾಗಿದೆ. ಸ್ಯಾಟಲೈಟ್ ರಿಂಗ್ ರೋಡ್ ಕಾಮಗಾರಿ ಪ್ರಗತಿಯಲ್ಲಿದೆ. ಪಿ.ಆರ್.ಆರ್ ಬಗ್ಗೆ ಆದಷ್ಟು ಬೇಗನೆ ತೀರ್ಮಾನ ಮಾಡಲಾಗುವುದು. ಮೆಟ್ರೊ 3ನೇ ಹಂತಕ್ಕೆ ಚಾಲನೆ ನೀಡಿದ್ದೇವೆ. ರಾಜಕಾಲುವೆಗಳ ಸಮಸ್ಯೆಗೆ 2 ಸಾವಿರ ಕೊಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರಮುಖ ಕೆರೆಗಳಿಗೆ ಗೇಟ್ ಅಳವಡಿಸಿ ನೀರಿನ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಮಾತನಾಡಿ, ಈ ಭಾಗದಲ್ಲಿ ಸಂಚಾರ ದಟ್ಟಣೆ ನಿವಾರಿಸಲು 19 ಕೋಟಿ ರೂ.ವೆಚ್ಚದಲ್ಲಿ ಕೆಳಸೇತುವೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಎಚ್‍ಎಎಲ್ ಮಾರುಕಟ್ಟೆ, ವಿಮಾನ ನಿಲ್ದಾಣ ಹಾಗೂ ವರ್ತೂರು, ವೈಟ್‍ಫೀಲ್ಡ್‍ಗೆ ಹಾದು ಹೋಗುವ ರಸ್ತೆಯಾಗಿದೆ. ಸಾಕಷ್ಟು ಐಟಿ, ಬಿಟಿ ಕಂಪೆನಿಗಳು ಇಲ್ಲಿವೆ ಎಂದರು.
ಬೆಂಗಳೂರು ನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ 7,500 ಕೋಟಿ ರೂ.ಗಳ ಅನುದಾನ ಒದಗಿಸಿದ್ದಾರೆ. ಎಲ್ಲ ರಸ್ತೆಗಳ ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ. ಎಚ್‍ಎಎಲ್ ವಾರ್ಡ್‍ನಲ್ಲಿ 10ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. 204ಕೋಟಿ ರೂ.ಗಳ ಅನುದಾನವನ್ನು ನನ್ನ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಮಳೆಗಾಲದಲ್ಲಿ ಯಾವುದೆ ಅನಾಹುತಗಳು ಆಗದಂತೆ ತಡೆಯಲು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರ ನೀಡಿದ್ದಾರೆ. ಟಿನ್‍ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಿಕೊಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಅದನ್ನು ಈ ಬಜೆಟ್‍ನಲ್ಲಿ ಘೋಷಿಸುವಂತೆ ಕೋರಿದ್ದೇನೆ ಎಂದು ಬಸವರಾಜ ತಿಳಿಸಿದರು.
ಸ್ಮಾರ್ಟ್‍ಸಿಟಿ ಯೋಜನೆಯಡಿ 1ಸಾವಿರ ಕೋಟಿ ರೂ.ಗಳ ಅನುದಾನದಲ್ಲಿ ಕೆಲಸಗಳು ಪ್ರಗತಿಯಲ್ಲಿದ್ದು, ಎಪ್ರಿಲ್ ವೇಳೆಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಗಾರ ರಾಕೇಶ್ ಸಿಂಗ್, ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಡಾ. ಕೆ.ವಿ.ತ್ರಿಲೋಕ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.








