ಧರ್ಮದ ಕುರಿತು ಅವಹೇಳನ ಪ್ರಕರಣ: ಭಗವಾನ್, ಮಹೇಶ್ ಚಂದ್ರಗುರು, ಅರವಿಂದ ಮಾಲಗತ್ತಿ ಆರೋಪ ಮುಕ್ತ

ಮೈಸೂರು.ಫೆ.9: ಧರ್ಮದ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದ ಪ್ರಕರಣದಲ್ಲಿ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಸಾಹಿತಿ ಅರವಿಂದ ಮಾಲಗತ್ತಿ ಅವರನ್ನು ಆರೋಪ ಮುಕ್ತಗೊಳಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ 2016 ರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಈ ಮೂವರು ಧಾರ್ಮಿಕ ಅವಹೇಳನ ಮಾಡಿದ್ದಾರೆ ಎಂದು ಅದೇ ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು ಆರೋಪಿಸಿ ಮೈಸೂರಿನಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧವೂ ಅದೇ ವರ್ಷ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬುಧವಾರ ಪ್ರಕರಣದ ಸಂಬಂಧ ಪ್ರೊ.ಕೆ.ಎಸ್.ಭಗವಾನ್, ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮತ್ತು ಅರವಿಂದ ಮಾಲಗತ್ತಿ ಧಾರ್ಮಿಕ ಅವಹೇಳನ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಬಲವಾದ ಸಾಕ್ಷಾಧಾರಗಳಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಹಾಗಾಗಿ ಈ ಮೂವರನ್ನು ಆರೋಪ ಮುಕ್ತಗೊಳಿಸಿದೆ ಎಂದು ಈ ಮೂವರ ಪರ ವಕಾಲತ್ತು ವಹಿಸಿದ್ದ ವಕೀಲರು ತಿಳಿಸಿದ್ದಾರೆ.
ಇತ್ತೀಚೆಗೆ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ರಾಮ ದಿರ ಏಕೆ ಬೇಡ ಎಂಬ ಕೃತಿಯಲ್ಲಿ ರಾಮನ ಕುರಿತು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರದ ಜೆ.ಎಂ.ಎಫ್. ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 19 ರಂದು ಪ್ರೊ.ಕೆ.ಎಸ್.ಭಗವಾನ್ ಜಾಮೀನು ಪಡೆದು ಹೊರಬಂದಿದ್ದರು.







