2022ರಲ್ಲಿ ಭಾರತೀಯ ಪೌರತ್ವ ತೊರೆದ 2 ಲಕ್ಷಕ್ಕೂ ಅಧಿಕ ಮಂದಿ: ಕೇಂದ್ರ ಸರ್ಕಾರ

ಹೊಸದಿಲ್ಲಿ: ಸರ್ಕಾರಿ ದತ್ತಾಂಶಗಳ ಪ್ರಕಾರ, 2022ರ ಸಾಲಿನಲ್ಲಿ 2,25,620 ಮಂದಿ ಸೇರಿದಂತೆ 2011ರಿಂದ ಇಲ್ಲಿಯವರೆಗೆ 16 ಲಕ್ಷ ಮಂದಿ ಭಾರತೀಯ ಪೌರತ್ವ ತೊರೆದಿದ್ದಾರೆ. ಈ ಪೈಕಿ 2022ನೇ ಸಾಲಿನಲ್ಲಿ ಹೆಚ್ಚು ಮಂದಿ ಭಾರತೀಯ ಪೌರತ್ವ ತೊರೆದಿದ್ದರೆ, 2020ರಲ್ಲಿ 85,256 ಮಂದಿ ಮಾತ್ರ ಭಾರತೀಯ ಪೌರತ್ವ ತೊರೆದಿದ್ದು, 2011ರಿಂದೀಚೆಗೆ ಇದು ಕನಿಷ್ಠ ಮಟ್ಟವಾಗಿದೆ ಎಂದು ಹೇಳಿದೆ ಎಂದು ndtv.com ವರದಿ ಮಾಡಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್(S. Jaishankar), ವರ್ಷಾಧಾರಿತವಾಗಿ ಭಾರತೀಯ ಪೌರತ್ವ ತೊರೆದವರ ಸಂಖ್ಯೆಯ ಮಾಹಿತಿಯನ್ನು ನೀಡಿದರು. 2015ರಲ್ಲಿ ಭಾರತೀಯ ಪೌರತ್ವ ತೊರೆದವರ ಸಂಖ್ಯೆ 1,31,489 ಆಗಿದ್ದರೆ, 2016ರಲ್ಲಿ 1,41,603 ಹಾಗೂ 2017ರಲ್ಲಿ 1,33,049 ಆಗಿತ್ತು ಎಂದು ತಿಳಿಸಿದ್ದಾರೆ.
ಈ ಸಂಖ್ಯೆ 2018ರಲ್ಲಿ 1,34,561 ಇದ್ದರೆ, 2019ರಲ್ಲಿ 1,44,017, 2020ರಲ್ಲಿ 85,256 ಹಾಗೂ 2021ರಲ್ಲಿ 1,63,370 ಹಾಗೂ 2022ರಲ್ಲಿ 2,25,620 ಇತ್ತು ಎಂದು ಅವರು ಹೇಳಿದ್ದಾರೆ. ದತ್ತಾಂಶದ ಅಗತ್ಯತೆಗಾಗಿ 2011ರಲ್ಲಿ 1,22,819, 2012ರಲ್ಲಿ 1,20,923, 2013ರಲ್ಲಿ 1,31,405 ಹಾಗೂ 2014ರಲ್ಲಿ 1,29,328 ಮಂದಿ ಭಾರತೀಯ ಪೌರತ್ವ ತೊರೆದಿದ್ದಾರೆ ಎಂದು ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ, 2011ರಿಂದ ಇಲ್ಲಿಯವರೆಗೆ ಭಾರತೀಯ ಪೌರತ್ವ ತೊರೆದಿರುವವರ ಒಟ್ಟು ಸಂಖ್ಯೆ 16,63,440 ಆಗಿದೆ.







