ಊಟದ ತಟ್ಟೆ ವಿವಾದ: ಆರ್ಕೆಸ್ಟ್ರಾ ತಂಡದಿಂದ ಕೇಟರಿಂಗ್ ಉದ್ಯೋಗಿಯ ಥಳಿಸಿ ಹತ್ಯೆ

ಹೊಸದಿಲ್ಲಿ,ಫೆ.9: ವಿವಾಹ ಸಮಾರಂಭದಲ್ಲಿ ಊಟದ ತಟ್ಟೆಗಳ ಲಭ್ಯತೆಯ ಕುರಿತು ಉಂಟಾದ ವಾಗ್ವಾದವು ವಿಕೋಪಕ್ಕೆ ತಿರುಗಿ, ಆರ್ಕೆಸ್ಟ್ರಾ(Orchestra) ತಂಡವೊಂದರ ಸದಸ್ಯರು ಕೇಟರಿಂಗ್ ಸಿಬ್ಬಂದಿಯೊಬ್ಬನನ್ನು ಹಿಗ್ಗಾಮಗ್ಗಾ ಥಳಿಸಿ ಹತ್ಯೆಗೈದ ಘಟನೆ ಬುಧವಾರ ರಾತ್ರಿ ಹೊಸದಿಲ್ಲಿಯಲ್ಲಿ ನಡೆದಿದೆ.
ನಗರದ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ತಂಡದ ಸದಸ್ಯರು ಕೇಟರಿಂಗ್ ಸಿಬ್ಬಂದಿ ಸಂದೀಪ್ ಸಿಂಗ್(Sandeep Singh) ಬಳಿ ಊಟಕ್ಕೆ ಪ್ಲೇಟ್ ನೀಡುವಂತೆ ತಿಳಿಸಿದರು. ತಟ್ಟೆಗಳನ್ನು ತೊಳೆಯಲಾಗುತ್ತಿದ್ದು, ಸ್ವಲ್ಪ ಸಮಯದ ಆನಂತರ ಲಭ್ಯವಾಗಲಿದೆಯೆಂದು ಆತ ತಿಳಿಸಿದ್ದನು.
ಪ್ಲೇಟ್‌ಗಳು ಸಿಗುವುದು ತಡವಾದ್ದರಿಂದ ರೋಷತಪ್ತರಾದ ಆರ್ಕೆಸ್ಟ್ರಾ ತಂಡದ ಇಬ್ಬರು ಸದಸ್ಯರು ಪ್ಲಾಸ್ಟಿಕ್ ಕ್ರೇಟ್‌ನಿಂದ ಸಂದೀಪ್ ಹಿಗ್ಗಾಮಗ್ಗಾ ಥಳಿಸಿದ್ದಾರೆ. ಗಂಭೀರ ಗಾಯಗೊಂಡ ಆತನನ್ನು ಸಹದ್ಯೋಗಿಗಳು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆತ ಬರುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಘರ್ಷಣೆಯಲ್ಲಿ ನಾಲ್ಕು ಮಂದಿ ಶಾಮೀಲಾಗಿದ್ದಾರೆಂದು ಪೊಲೀಸರು ತಿಳಿಸಿದ್ದು, ಅವರಲ್ಲಿ ನಾಲ್ವರನ್ನು ಬಂಧಿಸಲಾಗಿದೆಯೆಂದು ಹೇಳಿದ್ದಾರೆ. ಆರ್ಕೆಸ್ಟ್ರಾ ತಂಡದ ಇನ್ನಿಬ್ಬರು ಸದಸ್ಯರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಾಪತ್ತೆಯಾದ ಆರೋಪಿಗಳನ್ನು ಸೆರೆಹಿಡಿಯಲು ಹಲವಾರು ತಂಡಗಳನ್ನು ರಚಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳು ಅಡಗಿಕೊಳ್ಳುವ ಸಾಧ್ಯತೆಯಿದ್ದ ಹಲವು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.







