ಪತ್ರಕರ್ತ ಶಶಿಕಾಂತ್ ವಾರಿಶೆ ಸಾವಿನ ತನಿಖೆಗೆ ವ್ಯಾಪಕ ಆಗ್ರಹ, ಕೊಲೆ ಶಂಕೆ

ಮುಂಬೈ,ಫೆ.9: ಮಹಾರಾಷ್ಟ್ರದ ಪತ್ರಕರ್ತ ಶಶಿಕಾಂತ್ ವಾರಿಶೆ(Shashikant Varishe) ಅವರ ನಿಗೂಢ ಸಾವಿನ ಬಗ್ಗೆ ವ್ಯಾಪಕ ಆಕ್ರೋಶ ಹಾಗೂ ಆಘಾತ ವ್ಯಕ್ತವಾಗಿದೆ. ವಾರಿಶೆ ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಮಹಾರಾಷ್ಟ್ರದ ಪತ್ರಕರ್ತರು ಹಾಗೂ ಮಾನವಹಕ್ಕು ಹೋರಾಟಗಾರರು ಆಗ್ರಹಿಸಿದ್ದಾರೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಪೆಟ್ರೋಲ್ ಬಂಕೊಂದರ ಸಮೀಪ 48 ವರ್ಷದ ವಾರಿಶೆ ಅವರ ಮೇಲೆ ಕಾರೊಂದು ಹರಿದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕೊಂಕಣ್ ಪ್ರದೇಶದಲ್ಲಿರುವ ವಿವಾದಾತ್ಮಕ ತೈಲ ಸಂಸ್ಕರಣಾ ಸ್ಥಾವರ ಯೋಜನೆಯನ್ನು ಬಯಲಿಗೆಳೆಯುವ ವರದಿಯನ್ನು ಪ್ರಕಟಿಸಿದ ಮಾರನೇ ದಿನವೇ ಅವರು ರಸ್ತೆ ಅವಘಡದಲ್ಲಿ ಸಾವಿಗೀಡಾಗಿದ್ದರು. ವಾರಿಶೆ ಸಾವು ಅವಘಡವಲ್ಲ ಕೊಲೆ ಎಂದು ಹಲವಾರು ಮಾಧ್ಯಮ ಸಂಘಟನೆಗಳು ಆರೋಪಿಸಿವೆ. ಅವರ ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಿವೆ. ಬಹುಕೋಟಿ ಡಾಲರ್ ಮೌಲ್ಯದ ಯೋಜನೆಯ ಕುರಿತಾಗಿ ಅವರು ಬರೆದ ಲೇಖನಗಳನ್ನು ಹಲವು ಮಂದಿಯ ಕೆಂಗಣ್ಣಿಗೆ ಕಾರಣವಾಗಿದ್ದು, ಅವರನ್ನು ಕೊಲೆಗೈಯಲಾಗಿದೆಯೆಂದು ಅವು ಆಪಾದಿಸಿವೆ.
ಸೋಮವಾರ ಪ್ರಕಟವಾದ ಲೇಖನದಲ್ಲಿ ಹೆಸರಿಸಲ್ಪಟ್ಟಿದ್ದ ಭೂವ್ಯವಹಾರಗಳ ಡೀಲರ್ ಪಂಡರಿನಾತ್ ಆಂಬ್ರೇಕರ್ ಚಲಾಯಿಸುತ್ತಿದ್ದ ಎಸ್‌ಯುವಿ ವಾಹನವು ಶಶಿಕಾಂತ್ ಅವರಿಗೆ ಢಿಕ್ಕಿ ಹೊಡೆದಿತ್ತು.
ಗಂಭೀರ ಗಾಯಗೊಂಡಿದ್ದ ವಾರಿಶೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 42 ವರ್ಷದ ಆಂಬ್ರೇಕರ್ ವಿರುದ್ಧ ಪೊಲೀಸರು ಈಗ ಕೊಲೆ ಆರೋಪವನ್ನು ದಾಖಲಿಸಿದ್ದಾರೆ. ಮೊದಲಿಗೆ ಆತನ ವಿರುದ್ಧ ಸಾವಿಗೆ ಕಾರಣವಾದ ದಂಡನೀಯ ಅಪರಾಧ ಎಸಗಿದ ಆರೋಪವನ್ನು ಹೊರಿಸಲಾಗಿತ್ತು.
ಮಹಾನಗರಿ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ವಾರಿಶೆ ಅವರು, ಲ್ಯಾಂಡ್‌ಡೀಲರ್ ಅಂಬ್ರೇಕರ್ ಅವರನ್ನು ಕ್ರಿಮಿನಲ್ ಎಂಬುದಾಗಿ ಬಣ್ಣಿಸಿದ್ದರು ಹಾಗೂ ಆತ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಂತಹ ಉನ್ನತಮಟ್ಟದ ರಾಜಕೀಯ ನಾಯಕರ ಜೊತೆ ಫೋಟೊ ತೆಗೆಸಿಕೊಂಡಿದ್ದಾನೆ ಎಂದು ವರದಿಯಲ್ಲಿ ಬರೆದಿದ್ದರು.
ಅಂಬ್ರೇಕರ್ ವರು ರತ್ನಗಿರಿ ತೈಲಸಂಸ್ಕರಣಾಗಾರ ಹಾಗೂ ಪೆಟ್ರೋಲ್ ಯೋಜನೆಯ ಬೆಂಬಲಿಗನೆಂದು ಹೇಳಲಾಗುತ್ತಿದೆ. ಈ ಯೋಜನೆಯನ್ನು ವಿರೋಧಿಸಿ ಶಶಿಕಾಂತ್ ಅವರು ಮರಾಠಿ ಸುದ್ದಿಪತ್ರಿಕೆಗಳಲ್ಲಿ ಸರಣಿ ಲೇಖನಗಳನ್ನು ಬರೆದಿದ್ದರು.







