ಚಕ್ರತೀರ್ಥರಿಂದ ದಿಕ್ಸೂಚಿ ಭಾಷಣ ಯಕ್ಷಗಾನಕ್ಕೆ ಮಾಡುವ ಅವಮಾನ: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಐರೋಡಿ ಗೋವಿಂದಪ್ಪ

ಉಡುಪಿ: ಯಕ್ಷಗಾನ ಕರ್ನಾಟಕದ ಗಂಡುಕಲೆ. ಇದರಲ್ಲಿ ಬಹಳಷ್ಟು ಸಾಧನೆ ಮಾಡಿರುವ, ಯಕ್ಷಗಾನದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಸಾಕಷ್ಟು ಮಂದಿ ವಿದ್ವಾಂಸರು, ಧೀಮಂತ ಹಿರಿಯ ಕಲಾವಿದರು ಕರಾವಳಿಯಲ್ಲಿದ್ದಾರೆ. ಇವರನ್ನೆಲ್ಲಾ ಕಡೆಗಣಿಸಿ, ಯಕ್ಷಗಾನದ ಬಗ್ಗೆ ಗಂಧಗಾಳಿ ಗೊತ್ತಿಲ್ಲದವರನ್ನು ದಿಕ್ಸೂಚಿ ಭಾಷಣಕ್ಕೆ ಆಯ್ಕೆ ಮಾಡಿರುವುದು ವಿಷಾದನೀಯ. ಇದು ಕಲೆಗೆ ಮಾಡಿದ ದೊಡ್ಡ ಅವಮಾನ. ಇದಕ್ಕೆ ಒಬ್ಬ ಕಲಾವಿದನಾಗಿ ನನ್ನ ವಿರೋಧವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಹೇಳಿದ್ದಾರೆ.
ಉಡುಪಿಯಲ್ಲಿ ಫೆ.11 ಮತ್ತು 12ರಂದು ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಗೋಷ್ಠಿಯ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣಕ್ಕೆ ಉಡುಪಿ ಮೂಲದ ವಿವಾದಿತ ಲೇಖಕ ರೋಹಿತ್ ಚಕ್ರತೀರ್ಥ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಅವರು ಇಂದು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಭಯ ಜಿಲ್ಲೆಗಳಲ್ಲಿ ಯಕ್ಷಗಾನದಲ್ಲಿ ಸಾಧನೆ ಮಾಡಿರುವ ಸಾಕಷ್ಟು ಮಂದಿ ಇರುವಾಗ, ಯಕ್ಷಗಾನದ ಗಂಧಗಾಳಿ ಇಲ್ಲದ ವ್ಯಕ್ತಿಯಿಂದ ರಾಜ್ಯಮಟ್ಟದ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿಸುವುದು ಯಕ್ಷಗಾನಕ್ಕೆ ಮಾಡುವ ದೊಡ್ಡ ಅವಮಾನ. ಸಂಘಟಕರು ತಮ್ಮ ಈ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕೆಂದು ತಾವು ಮನವಿ ಮಾಡುವುದಾಗಿ ಅವರು ತಿಳಿಸಿದರು.
ರೋಹಿತ್ ಚಕ್ರತೀರ್ಥ ಹಿಂದುಳಿದ ವರ್ಗದವರ ಹಾಗೂ ಬಿಲ್ಲವರ ಆಶಾಕಿರಣವಾದ ಬ್ರಹ್ಮಶ್ರೀ ನಾರಾಯಣಗುರುಗಳ ಪಾಠವನ್ನು ಎಸೆಸೆಲ್ಸಿ ಪುಸ್ತಕದಿಂದ ಕೈಬಿಟ್ಟು ಇಡೀ ಹಿಂದುಳಿದ ವರ್ಗದ ಕಂಗೆಣ್ಣಿಗೆ ಗುರಿಯಾದ ವ್ಯಕ್ತಿ. ಇಂಥವರನ್ನು ದಿಕ್ಸೂಚಿ ಭಾಷಣಕ್ಕೆ ಕರೆದಿರುವುದು ಈ ಕಲೆಗೆ ಮಾಡಿದ ಬಹುದೊಡ್ಡ ಅವಮಾನ ಎಂದು ನಾವು ಭಾವಿಸುತ್ತೇವೆ ಎಂದು ಕಟಪಾಡಿ ಯುವವಾಹಿನಿಯ ಅಧ್ಯಕ್ಷ ಸುನಿಲ್ ಬಂಗೇರ ನುಡಿದರು.
ಕರಾವಳಿಯ ಯಕ್ಷಗಾನ ಕಲೆ ಇಂದು ಇಡೀ ವಿಶ್ವದದ ಪ್ರಸಿದ್ಧ ಕಲೆಯಾಗಿ ಬೆಳೆದಿದೆ.ಇಂಥ ಮಹಾನ್ ಕಲೆಯೊಂದರ ರಾಜ್ಯ ಸಮ್ಮೇಳನ ನಡೆಯುವುದನ್ನು ನಾವು ಅತ್ಯಂತ ಖುಷಿಯಿಂದ ಸ್ವಾಗತಿಸುತ್ತೇವೆ. ಸಮ್ಮೇಳನಾಧ್ಯಕ್ಷರಾಗಿ ಡಾ.ಪ್ರಭಾಕರ ಜೋಶಿಯಂಥ ಹಿರಿಯ ವಿದ್ವಾಂಸ ಹಾಗೂ ಕಲಾವಿದರನ್ನು ಆಯ್ಕೆ ಮಾಡಿರುವುದು ಯಕ್ಷಗಾನ ಪ್ರಿಯರಿಗೆ ಸಂತೋಷ ನೀಡುವ ವಿಷಯ ಎಂದು ಅವರು ಹೇಳಿದರು.
ಕರಾವಳಿಯಲ್ಲಿ ಕಲೆಯನ್ನು ಅತ್ಯದ್ಭುತವಾಗಿ ಸಂಘಟಿಸುವ ಮಹನೀಯರಿದ್ದಾರೆ. ಯಕ್ಷಗಾನ ಪ್ರಸಂಗ ಬರೆದು ಪ್ರಸಿದ್ಧರಾದವರಿದ್ದಾರೆ. ಹಲವು ಹಿರಿಯ ಕಲಾವಿದರು, ಭಾಗವತರು, ಚಂಡೆವಾದಕರು, ಮದ್ದಲೆವಾದಕರು ಯಕ್ಷಗಾನದ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗಿ ಅದರ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಸುನಿಲ್ ಬಂಗೇರ ತಿಳಿಸಿದರು.
ಯಕ್ಷಗಾನ ಮಟ್ಟಿಗೆ ಏನೂ ಅಲ್ಲದ ರೋಹಿತ್ ಚಕ್ರತೀರ್ಥರನ್ನು ದಿಕ್ಸೂಚಿ ಭಾಷಣಕ್ಕೆ ಆಹ್ವಾನಿಸಿರುವುದು ಖಂಡನೀಯ. ಇದರೊಂದಿಗೆ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ನೀಡಿರುವ ಹೇಳಿಕೆ ವಿಷಾಧನೀಯ ಎಂದ ಬಂಗೇರ, ಇದಕ್ಕೆ ಹಿಂದುಳಿದ ವರ್ಗದವರು ಮುಂದಿನ ದಿನಗಳಲ್ಲಿ ಸಮರ್ಪಕ ಉತ್ತರ ನೀಡುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ದಸಂಸ ಮುಖಂಡ ಗಣೇಶ ನೇರ್ಗಿ ಉಪಸ್ಥಿತರಿದ್ದರು.







