ನೀರವ್ ಮೋದಿ ಭಾವನ ಹಾಂಕಾಂಗ್ ಪ್ರಯಾಣಕ್ಕೆ ಅನುಮತಿ: ಮರುವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್‌ಗೆ ಸುಪ್ರಿಂ ಸೂಚನೆ

ಹೊಸದಿಲ್ಲಿ, ಫೆ. 9: ಭಾರತೀಯ ಬ್ಯಾಂಕ್‌ಗಳಿಗೆ 13,000 ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ(Nirav Modi)ಯ ಭಾವ ಮೈನಾಕ್ ಮೆಹ್ತಾಗೆ ಹಾಂಕಾಂಗ್‌ಗೆ ಪ್ರಯಾಣಿಸಲು ಬಾಂಬೆ ಹೈಕೋರ್ಟ್(Bombay High Court) ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ(CBI) ಸಲ್ಲಿಸಿರುವ ಅರ್ಜಿಯನ್ನು ಹೊಸದಾಗಿ ನಾಲ್ಕು ವಾರಗಳಲ್ಲಿ ವಿಚಾರಣೆ ಮಾಡುವಂತೆ ಸೂಚಿಸಿ ಸುಪ್ರೀಂ ಕೋರ್ಟ್ (Supreme Court)ಗುರುವಾರ ಬಾಂಬೆ ಹೈಕೋರ್ಟ್‌ಗೆ ಕಳುಹಿಸಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ (PNB)ಗೆ ವಂಚಿಸಿದ ಪ್ರಕರಣದಲ್ಲಿ ನೀರವ್ ಮೋದಿ ಓರ್ವ ಆರೋಪಿಯಾಗಿದ್ದಾರೆ. ಪಿಎನ್‌ಬಿ ವಂಚನಾ ಹಗರಣದಿಂದ ಪಡೆದ ಅಗಾಧ ಪ್ರಮಾಣದ ಹಣವನ್ನು ಮೆಹ್ತಾ ಸ್ವೀಕರಿಸಿದ್ದಾರೆ ಹಾಗೂ ಅದನ್ನು ವಿದೇಶಗಳಲ್ಲಿರುವ ತನ್ನ ಮತ್ತು ತನ್ನ ಹೆಂಡತಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಸಿಬಿಐ ಮತ್ತು ಮೆಹ್ತಾ ಹೆಚ್ಚುವರಿ ದಾಖಲೆಗಳನ್ನು ಎರಡು ವಾರಗಳ ಅವಧಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಬಹುದಾಗಿದೆ ಹಾಗೂ ನಂತರದ ಎರಡು ವಾರಗಳಲ್ಲಿ ಅರ್ಜಿಯ ವಿಚಾರಣೆ ನಡೆಸಲಾಗುತ್ತದೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
ಮೆಹ್ತಾರ ಎರಡು ವಿದೇಶಿ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಲು ಮತ್ತು ತನಿಖೆ ನಡೆಸಲು ಸಿಬಿಐಗೆ ‘‘ಅಧಿಕಾರ ಪತ್ರ’’ವನ್ನು ನೀಡಲು ಅವರ ವಕೀಲ ಅಮಿತ್ ದೇಸಾಯಿ ಒಪ್ಪಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತು.
ಹಾಂಕಾಂಗ್‌ಗೆ ಪ್ರಯಾಣಿಸಲು ಮತ್ತು ಅಲ್ಲಿ ಮೂರು ತಿಂಗಳು ವಾಸಿಸಲು ಬಾಂಬೆ ಹೈಕೋರ್ಟ್ ಕಳೆದ ವರ್ಷದ ಆಗಸ್ಟ 23ರಂದು ಮೆಹ್ತಾಗೆ ಅನುಮತಿ ನೀಡಿತ್ತು. ಅದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಮೆಹ್ತಾ ವಿರುದ್ಧ ಸಿಬಿಐ ಹೊರಡಿಸಿದ್ದ ತಪಾಸಣಾ ಸುತ್ತೋಲೆಯನ್ನು ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯವು ರದ್ದುಪಡಿಸಿತ್ತು ಹಾಗೂ ಮೂರು ತಿಂಗಳ ಅವಧಿಗೆ ಹಾಂಕಾಂಗ್‌ಗೆ ಹೋಗಲು ಅನುಮತಿ ನೀಡಿತ್ತು. ಈ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿತ್ತು.







