ನೀತಿ ಸಂಹಿತೆಯನ್ನು ಉಲ್ಲಂಘಿಸಿದ ದೃಶ್ಯವಾಹಿನಿಗಳ ವಿರುದ್ಧ 2018ರಿಂದೀಚೆಗೆ 178 ಪ್ರಕರಣಗಳು ದಾಖಲು: ಕೇಂದ್ರ ಸರ್ಕಾರ

ಹೊಸ ದಿಲ್ಲಿ: ಕಾರ್ಯಕ್ರಮ ನೀತಿ ಸಂಹಿತೆ ಉಲ್ಲಂಘಿಸಿದ ಖಾಸಗಿ ದೃಶ್ಯವಾಹಿನಿಗಳ ವಿರುದ್ಧ ದಾಖಲಾಗಿದ್ದ 178 ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವು ಕ್ರಮ ಜರುಗಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್(Anurag Thakur) ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ ಎಂದು scroll.in ವರದಿ ಮಾಡಿದೆ.
ಆಮ್ ಆದ್ಮಿ ಸಂಸದ ರಾಘವ್ ಚಡ್ಡಾ(Raghav Chadha) ಅವರ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು. ಕೆಲವು ಉಲ್ಲಂಘನೆ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವು ದೃಶ್ಯವಾಹಿನಿಗಳಿಗೆ ಮಾರ್ಗಸೂಚಿ ಹಾಗೂ ಎಚ್ಚರಿಕೆಯನ್ನು ಬಿಡುಗಡೆ ಮಾಡಿದೆ. ಮತ್ತೂ ಕೆಲವು ಪ್ರಕರಣಗಳಲ್ಲಿ ದೃಶ್ಯವಾಹಿನಿಗಳು ಕ್ಷಮಾಪಣೆಯನ್ನು ಪ್ರಸಾರ ಮಾಡಬೇಕು ಮತ್ತು ಕಾರ್ಯಕ್ರಮ ಪ್ರಸಾರವನ್ನು ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ವಿಚಲಿತಗೊಳಿಸುವ ಮೃತ್ಯು ಘಟನೆ, ಅಪಘಾತ ಹಾಗೂ ಹಿಂಸೆಯನ್ನು ಪ್ರಸಾರ ಮಾಡಿದ್ದ ಖಾಸಗಿ ವಾಹಿನಿಗಳಿಗೆ ಜನವರಿ 9ರಂದು ಕೇಂದ್ರ ಸರ್ಕಾರವು ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದೂ ಅವರು ಹೇಳಿದ್ದಾರೆ.
"ಇತರ ವಿಷಯಗಳೊಂದಿಗೆ ಕಾರ್ಯಕ್ರಮ ನೀತಿ ಸಂಹಿತೆಯು ಉತ್ತಮ ಅಭಿರುಚಿ ಅಥವಾ ಸಭ್ಯತೆಗೆ ವಿರುದ್ದವಿರುವ ಮತ್ತು ಅನಿರ್ಬಂಧಿತ ಸಾರ್ವಜನಿಕ ಪ್ರಸಾರಕ್ಕೆ ಯೋಗ್ಯವಲ್ಲದ ಕಾರ್ಯಕ್ರಮಗಳನ್ನು ಅಪರಾಧ ಎಂದು ಪರಿಗಣಿಸುತ್ತದೆ. ಕಾರ್ಯಕ್ರಮ ನೀತಿ ಸಂಹಿತೆ ಉಲ್ಲಂಘನೆಯ ವಿರುದ್ಧ ಕೇಂದ್ರ ಸರ್ಕಾರವು ಸೂಕ್ತ ಕ್ರಮ ಜರುಗಿಸಲಿದೆ" ಎಂದು ಅವರು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸದ ನಾರಾಯಣ್ ದಾಸ್ ಗುಪ್ತ(N.D.Gupta) ಅವರ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾರ್ಯಕ್ರಮ ನೀತಿ ಸಂಹಿತೆಯ ಪ್ರಕಾರ, ಯಾವುದೇ ಕೋಮು ಅಥವಾ ಸಮುದಾಯದ ವಿರುದ್ಧದ ದಾಳಿಯನ್ನು ಪ್ರಸಾರ ಮಾಡುವಂತಿಲ್ಲ ಎಂದು ಮಾಹಿತಿ ನೀಡಿದ್ದಾರೆ.







