ಏಂಜೆಲಾ ಮರ್ಕೆಲ್‌ಗೆ ಯುನೆಸ್ಕೊ ಶಾಂತಿ ಪುರಸ್ಕಾರ

ಬರ್ಲಿನ್, ಫೆ.9: ತನ್ನ ಅಧಿಕಾರಾವಧಿಯಲ್ಲಿ ಸುಮಾರು 1.2 ದಶಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ದೇಶದಲ್ಲಿ ಆಶ್ರಯ ಕಲ್ಪಿಸುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದ ಜರ್ಮನಿಯ ಮಾಜಿ ಛಾನ್ಸಲರ್ ಏಂಜೆಲಾ ಮರ್ಕೆಲ್‌ಗೆ ಪ್ರತಿಷ್ಟಿತ ಯುನೆಸ್ಕೋ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಗಿದೆ.
ಐವರಿಕೋಸ್ಟ್ ದೇಶದ ರಾಜಧಾನಿ ಯಮೋಸುಕ್ರೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರ್ಕೆಲ್‌ಗೆ ‘ಫೆಲಿಕ್ಸ್ ಹುಫೌಟ್-ಬೊಯ್ನಿ ಯುನೆಸ್ಕೋ ಶಾಂತಿ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ನಿರಾಶ್ರಿತರಿಗೆ ಯುರೋಪ್‌ನ ಬಾಗಿಲು ಮುಚ್ಚಬೇಕೆಂದು ಹಲವಾರು ಧ್ವನಿಗಳು ಆಗ್ರಹಿಸುತ್ತಿದ್ದ ಸಂದರ್ಭದಲ್ಲೇ ತನ್ನ ದೇಶದ ಬಾಗಿಲನ್ನು 1.2 ದಶಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ತೆರೆದಿಡುವ ಧೈರ್ಯಶಾಲಿ ನಿರ್ಧಾರ ಕೈಗೊಂಡ ಮರ್ಕೆಲ್ ಈ ಗೌರವಕ್ಕೆ ಅರ್ಹರು. ಆ ಸಮಯದಲ್ಲಿ ಅವರದು ಧೈರ್ಯದ ದೃಷ್ಟಿಕೋನವಾಗಿತ್ತು ಎಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ(ಯುನೆಸ್ಕೋ)ದ ಪ್ರಧಾನ ನಿರ್ದೇಶಕ ಆಡ್ರೆಯ್ ಅರೌಲೆ ಹೇಳಿದ್ದಾರೆ.
2015 ಮತ್ತು 2016ರಲ್ಲಿ ಸಿರಿಯಾದ ಯುದ್ಧದಿಂದ ಬಿಕ್ಕಟ್ಟು ಪರಾಕಾಷ್ಟೆಗೆ ತಲುಪಿದ್ದ ಸಂದರ್ಭ ಮರ್ಕೆಲ್ ಕೈಗೊಂಡ ಈ ನಿರ್ಧಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.