ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಕ್ಕೆ ಸೂಕ್ತ ದಾಖಲೆ ಒದಗಿಸಿದರೆ ಕ್ರಮ: ಎಡಿಜಿಪಿ

ಮಂಗಳೂರು: ಪೊಲೀಸರ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪಕ್ಕೆ ಸರಿಯಾದ ದಾಖಲೆ ಒದಗಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ನಗರದ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಗುರುವಾರ ರಾತ್ರಿ ದ.ಕ. ಜಿಲ್ಲೆಯ ಅಧೀಕ್ಷಕರ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಯಾರ ಮೇಲೆ ಆರೋಪ ಮಾಡುವುದಿದ್ದರೂ ಅದಕ್ಕೆ ಸರಿಯಾದ ದಾಖಲೆ ಕೊಡಲಿ. ಭ್ರಷ್ಟಾಚಾರ ನಡೆದಿದೆ ಎಂದರೆ ಎಲ್ಲಿ ಹೇಗೆ ಎಂದು ದಾಖಲೆ ಕೊಡಲಿ ಎಂದು ಹೇಳಿದರು.
ಇತ್ತೀಚೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪತ್ತೆಯಾದ ವೈದ್ಯರ ಮತ್ತು ವೈದ್ಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಪೊಲೀಸ್ ಅಧಧಿಕಾರಿಗಳಿಂದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸುದ್ದಿಗಾರರು ಗಮನ ಸೆಳೆದಾಗ ಆಧಾರರಹಿತ ಆರೋಪಗಳಿಗೆ ಏನು ಮಾಡಲು ಸಾಧ್ಯವಾಗುವುದಿಲ್ಲ. ಭ್ರಷ್ಟಾಚಾರ ನಡೆದಿದೆ ಎಂದರೆ ಯಾರು ದುಡ್ಡು ತೆಗೆದುಕೊಂಡಿದ್ದಾರೆ ಹೇಳಲಿ? ದಾಖಲೆ ಕೊಡಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ಪ್ರದೇಶಗಳ ಕುರಿತು ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ಮಂಗಳೂರು ನಗರ ಆಯುಕ್ತರ ವ್ಯಾಪ್ತಿಯ ಸುರತ್ಕಲ್, ಬಂದರು, ಉಳ್ಳಾಲ ಇತ್ಯಾದಿ ಮೂರ್ನಾಲ್ಕು ಕೋಮು ಸೂಕ್ಷ್ಮ ಪೊಲೀಸ್ ಠಾಣೆಗಳಿವೆ. ಅದೇ ರೀತಿ ದ.ಕ. ಪೊಲೀಸ್ ವ್ಯಾಪ್ತಿಯಲ್ಲಿ ಬಂಟ್ವಾಳ, ಪುಂಜಾಲಕಟ್ಟೆ, ಪುತ್ತೂರು, ಬೆಳ್ತಂಗಡಿ ಕೂಡ ಕೋಮು ಸೂಕ್ಷ್ಮ ಠಾಣೆಗಳಿವೆ. ಇಂಥ ಕಡೆಗಳಲ್ಲಿ ಶಾಂತಿ ಸಮಿತಿ ಸಭೆಯನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಸೂಚಿಸಲಾಗಿದೆ. ಸಮಾಜದೊಂದಿಗೆ ಪೊಲೀಸರಿಗೆ ನೇರವಾದ ಸಂಪರ್ಕ ಇರಬೇಕು ಎನ್ನುವ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವರ ದ.ಕ. ಭೇಟಿಯ ಬಂದೋಬಸ್ತ್ ವಿಚಾರದ ಕುರಿತಾಗಿ ಮಂಗಳೂರಿಗೆ ಆಗಮಿಸಿದ್ದೇನೆ. ಚುನಾವಣಾ ಸಮಯದಲ್ಲಿ ಜನರ ಸಮಸ್ಯೆಗಳನ್ನು ಮರೆಯಬಾರದು ಎಂಬ ದೃಷ್ಟಿಯಿಂದ ಸಾರ್ವಜನಿಕರ ಕುಂದು ಕೊರತೆ ಸಭೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಪಶ್ಚಿಮ ವಲಯ ಡಿಐಜಿ ಡಾ.ಚಂದ್ರಗುಪ್ತ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮ್ಟೆ ವಿಕ್ರಮ್ ಉಪಸ್ಥಿತರಿದ್ದರು.