ಸೌದಿ: ನಬಾಟಿಯನ್ ಮಹಿಳೆಯ ನವೀಕರಿಸಿದ ಮುಖ ಅನಾವರಣ

ರಿಯಾದ್, ಫೆ.9: ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರ ಹಲವು ವರ್ಷಗಳ ಕಾರ್ಯದ ಬಳಿಕ, 2000ಕ್ಕೂ ಹೆಚ್ಚು ವರ್ಷಗಳ ಹಿಂದೆ ವಾಸಿಸುತ್ತಿದ್ದ ನಬಾಟಿಯನ್ ಮಹಿಳೆಯ ಪುನನಿರ್ಮಾಣದ ಮುಖವನ್ನು ಸೌದಿ ಅರೆಬಿಯಾ ಅನಾವರಣಗೊಳಿಸಿದೆ.
ವಾಯವ್ಯ ಸೌದಿಅರೆಬಿಯಾದ ಪುರಾತನ ಓಯಸಿಸ್ ನಗರದ ಅಲ್ಯುಲಾದಲ್ಲಿನ ಯುನೆಸ್ಕೋ ವಿಶ್ವಪರಂಪರೆಯ ತಾಣವಾದ ಹೆಗ್ರಾದಲ್ಲಿ 2000 ವರ್ಷದಷ್ಟು ಹಳೆಯದಾದ ಸಮಾಧಿಯಲ್ಲಿ ಪತ್ತೆಯಾದ ನಬಾಟಿಯನ್ ಮಹಿಳೆ ಹಿನಾತ್ ಅವರ ಅವಶೇಷಗಳನ್ನು ಆಧರಿಸಿ ಮುಖವನ್ನು ಪುನನಿರ್ಮಾಣಗೊಳಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಹಿನಾತ್‌ಳ ಮುಖದ ಮರುನಿರ್ಮಾಣ ಕಾರ್ಯ 2019ರಲ್ಲಿ ಬ್ರಿಟನ್‌ನಲ್ಲಿ ಆರಂಭಗೊಂಡಿತ್ತು. ಮುಖವನ್ನು ಸಿಲಿಕಾನ್‌ನಿಂದ ಮಾಡಲಾಗಿದ್ದು, ಚುಚ್ಚಿದ ಕಿವಿಗಳು ಮತ್ತು ಕೃತಕ ಕೂದಲನ್ನು ಪ್ರತ್ಯೇಕವಾಗಿ ನೆತ್ತಿಯ ಚರ್ಮಕ್ಕೆ ಸೇರಿಸಲಾಗಿದೆ. ಸಮಾಧಿಯಲ್ಲಿ ಕಂಡುಬಂದ ಮೂಳೆಯ ತುಣುಕುಗಳನ್ನು ಪುರಾತನ ದತ್ತಾಂಶವನ್ನು ಬಳಸಿಕೊಂಡು ಮಹಿಳೆಯ ಮುಖದ ರಚನೆಯನ್ನು ತಜ್ಞರ ತಂಡ ಮರುನಿರ್ಮಿಸಿದ್ದು 3ಡಿ ಪ್ರಿಂಟರನ್ನು ಬಳಸಲಾಗಿದೆ ಎಂದು ವರದಿ ಹೇಳಿದೆ.
ನಬಾಟಿಯನ್ನರು 2000 ವರ್ಷಗಳ ಹಿಂದೆ ಉತ್ತರ ಅರೆಬಿಯಾದಲ್ಲಿ ವಾಸಿಸುತ್ತಿದ್ದ ಪ್ರಾಚೀನ ನಾಗರಿಕತೆಯ ಭಾಗವಾಗಿದ್ದರು. ಪೆಟ್ರಾ ಈ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಮತ್ತು ಇದು ಮಸಾಲೆಗಳು, ಔಷಧಿ ಮತ್ತು ಬಟ್ಟೆವ್ಯಾಪಾರದ ಕೇಂದ್ರವಾಗಿತ್ತು ಎಂದು ವರದಿ ಹೇಳಿದೆ.