ಮಾಜಿ ಸಚಿವ ಟಿ.ಜಾನ್ ನಿಧನ

ಮಡಿಕೇರಿ ಫೆ.10: ಹಿರಿಯ ರಾಜಕಾರಣಿ, ಮಾಜಿ ಸಚಿವ ಟಿ.ಜಾನ್(92) ಇಂದು ಮುಂಜಾನೆ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ಟಿ.ಜಾನ್ ಅಬಕಾರಿ ಉದ್ಯಮದ ಮೂಲಕ ಹೆಸರು ಮಾಡಿದ್ದರು. ಕಷ್ಟ ಹೇಳಿಕೊಂಡು ಯಾರೇ ಹೋದರೂ ಸಹಾಯಹಸ್ತ ಚಾಚುತ್ತಿದ್ದ ಅವರು ಕೊಡುಗೈ ದಾನಿಯೆಂದೇ ಖ್ಯಾತರಾಗಿದ್ದರು.
'ಮೂಲತಃ ಕೇರಳದವರಾದ ಟಿ.ಜಾನ್, ಕೊಡಗಿಗೆ ಬಂದು ಶ್ರಮಿಕ ಜೀವಿಯಾಗಿ ದುಡಿದರು, ಉದ್ಯಮಿಯಾಗಿ ಬೆಳೆದರು. ಶಿಕ್ಷಣ ಸಂಸ್ಥೆಗಳು ಮತ್ತು ರೆಸಾರ್ಟ್ ಗಳನ್ನು ಆರಂಭಿಸಿ ಯಶಸ್ಸು ಕಂಡರು.
ಮೃತರ ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿಕ್ಷಣ ತಜ್ಞರು ಕೈಗಾರಿಕೋದ್ಯಮಿಗಳು, ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಶ್ರೀಯುತ ಟಿ ಜಾನ್ ಅವರು ನಿಧನರಾಗಿದ್ದು ಅವರಿಗೆ ನಮ್ಮ ಭಾವಪೂರ್ಣ ಅಂತಿಮ ನಮನಗಳು. ದೇವರು ಅವರಿಗೆ ಸದ್ಗತಿ ನೀಡಲಿ. pic.twitter.com/0mO1moAzoE
— Karnataka Congress (@INCKarnataka) February 10, 2023







