ಕಬಕ ಸರಕಾರಿ ಪಪೂ ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ ರೈಗೆ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ, ಫೆ.10: ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೇಮಲತಾ ರೈಯವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಮಾತನಾಡಿ, ಕಳೆದ 37 ವರ್ಷಗಳಿಂದ ಪ್ರೇಮಲತಾ ರೈ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಬಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರುಕ್ಮಯ್ಯ ಗೌಡ ಮಾತನಾಡಿ, ಪ್ರೇಮಲತಾ ರೈ ಕಾಲೇಜಿಗೆ ಸರಕಾರದಿಂದ ತರಗತಿ ಕೊಠಡಿ, ರಸ್ತೆ ಡಾಂಬರೀಕರಣ, ಊರ ಪರವೂರಿನ ದಾನಿಗಳ ಸಹಕಾರದಿಂದ ಇತರ ಭೌತಿಕ ಪರಿಕರಗಳನ್ನು ಒದಗಿಸಲು ವಿಶೇಷ ಮುತುವರ್ಜಿ ವಹಿಸಿದ್ದಾರೆ ಎಂದರು.
ನಿವೃತ್ತ ಪ್ರಾಧ್ಯಾಪಕ ಚಂದ್ರಹಾಸ ರೈ ಶುಭ ಹಾರೈಸಿದರು.
ವನಿತಾ ಕೆ., ಅಶ್ಮಿತಾ, ಕವನ, ಜಯಲಕ್ಷ್ಮಿ, ಚಂದ್ರಿಕಾ, ಲತಾಶ್ರೀ, ಶ್ರೀಮತಿ ಜಯಲಕ್ಷ್ಮಿ, ಮಮತಾ, ಕಸ್ತೂರಿ, ಕಬಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಲೋಚನಾ ಮೊದಲಾದವರು ಉಪಸ್ಥಿತರಿದ್ದರು.
ಇದೇವೇಳೆ ನಿವೃತ್ತ ಪ್ರಾಂಶುಪಾಲೆ ಪ್ರೇಮಲತಾ ರೈ ಹಾಗೂ ಕೆ.ಜಯರಾಮ ರೈಯವರನ್ನು ಸನ್ಮಾನಿಸಲಾಯಿತು.
ಕಾಲೇಜು ಪ್ರಾಂಶುಪಾಲ ಶ್ರೀಧರ್ ರೈ ಸ್ವಾಗತಿಸಿದರು, ಪ್ರಾಧ್ಯಾಪಕಿಯರಾದ ವಿಜೇತಾ ವಂದಿಸಿದರು. ನಯನಾ ಕಾರ್ಯಕ್ರಮ ನಿರೂಪಿಸಿದರು.







