ಸಿದ್ದರಾಮಯ್ಯ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದರೆ ಹೊಲ ಮಾರಿ ಹಣ ಕೊಡುವೆ ಎಂದ ಮತ್ತೊಬ್ಬ ಅಭಿಮಾನಿ

ವಿಜಯನಗರ, ಫೆ.10: ಮುಂಬರಲಿರುವ ವಿಧಾನಸಭೆ ಚುನಾವಣೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ಚುನಾವಣಾ ಖರ್ಚಿಗೆ ಹೊಲ ಮಾರಿ ಒಂದು ಕೋಟಿ ರೂ. ನೀಡುತ್ತೇನೆ ಎಂದು ಅಭಿಮಾನಿಯೊಬ್ಬರು ಘೋಷಿಸಿದ್ದಾರೆ.
ವಿಜಯನಗರ ತಾಲೂಕಿನ ಗಾದಿಗನೂರು ಗ್ರಾಮದ ಕೆ.ಎಸ್. ಮಲಿಯಪ್ಪ ಎಂಬವರೇ ವಿಡಿಯೋ ಹೇಳಿಕೆ ಮೂಲಕ ಸಿದ್ದರಾಮಯ್ಯ ಅವರಿಗೆ ಈ ಆಫರ್ ಘೋಷಿಸಿದ್ದು, ''ಗಾದಿಗನೂರು ಗ್ರಾಮದ ಗೋನಾಳ ಬಳಿ ಆರು ಎಕರೆ ಜಮೀನು ಇದೆ. ಈ ಪೈಕಿ ಎರಡು ಎಕರೆ ಜಮೀನು ಮಾರಾಟ ಮಾಡಿ, ಸಿದ್ದರಾಮಯ್ಯ ಅವರಿಗೆ ಹಣ ಕೊಡುವೆ'' ಎಂದು ಹೇಳಿದ್ದಾರೆ.
''ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಯೇ ಆಗಿಲ್ಲ. ರಸ್ತೆ, ಚರಂಡಿ ನೀರು, ಯಾವುದೇ ಮೂಲಸೌಕರ್ಯ ಇಲ್ಲದೆ ತುಂಬಾ ಸಮಸ್ಯೆಯಾಗಿದೆ. ಹಾಗಾಗಿ ಇಲ್ಲಿ ಅಭಿವೃದ್ಧಿ ಆಗಬೇಕಾದರೆ ಸಿದ್ದರಾಮಯ್ಯ ಸಾಹೇಬರು ಬರಲೇ ಬೇಕು'' ಎಂದು ಹೇಳಿದ್ದಾರೆ.
ಇತ್ತೀಚೆಗೆ ಯಾದಗಿರಿಯ ಬಿಜೆಪಿ ಮುಖಂಡ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಹಲವರು ಜಮೀನು ಮಾರಿ ಹಣ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನು ತಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದರು.
ಇದನ್ನೂ ಓದಿ: ಯಾದಗಿರಿಯಲ್ಲಿ ಸ್ಪರ್ಧಿಸಿದರೆ 1 ಕೋಟಿ ರೂ. ಕೊಡ್ತೇನೆ: ಸಿದ್ದರಾಮಯ್ಯ ಹೆಸರಲ್ಲಿ ಚೆಕ್ ಬರೆದ ಬಿಜೆಪಿ ಮುಖಂಡ







