ಮಂಡ್ಯ: ಮರದ ರೆಂಬೆ ಬಿದ್ದು ಪೌರಕಾರ್ಮಿಕ ಮೃತ್ಯು

ಮಂಡ್ಯ, ಫೆ.10: ಮರದ ಕೊಂಬೆ ಮುರಿದು ಮೇಲೆ ಬಿದ್ದು ನಗರಸಭೆ ಗುತ್ತಿಗೆ(ನೇರಪಾವತಿ) ಪೌರಕಾರ್ಮಿಕ ಸಾವನ್ನಪ್ಪಿ, ಪತ್ನಿ, ಮಗು ಗಾಯಗೊಂಡಿರುವ ಘಟನೆ ನಗರದ ತಾವರೆಗೆರೆ ಉದ್ಯಾನವನದ ಬಳಿ ಗುರುವಾರ ತಡರಾತ್ರಿ ನಡೆದಿದೆ.
ನೆಹರುನಗರದ ಬಳಿ ಇರುವ ಪೌರಕಾರ್ಮಿಕರ ಕಾಲನಿ ನಿವಾಸಿ ಉದಯಕುಮಾರ್(31) ಸಾವಿಗೀಡಾಗಿದ್ದು, ಗಾಯಗೊಂಡಿರುವ ಪತ್ನಿ ಧನಲಕ್ಷ್ಮಿ, 6 ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ತಡರಾತ್ರಿ ಉದಯ್ ಬೈಕ್‍ನಲ್ಲಿ ಪತ್ನಿ, ಮಗುವಿನೊಂದಿಗೆ ಉದ್ಯಾನವನದ ಬಳಿ ತೆರಳುತ್ತಿದ್ದಾಗ ಒಣಗಿದ್ದ ಮರದ ರೆಂಬೆ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಆಗಮಿಸಿದ ಗುತ್ತಿಗೆ ಪೌರಕಾರ್ಮಿಕರು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು, ದಿನೇಶ್, ಕರ್ನಾಟಕ ಶ್ರಮಿಕ ಶಕ್ತಿಯ ಸುಬ್ರಮಣ್ಯ ಅವರ ನೇತೃತ್ವದಲ್ಲಿ ಮೃತ ಕಾರ್ಮಿಕನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ನಗರಸಭೆ ಅಧ್ಯಕ್ಷ ಎಸ್.ಎಚ್.ಮಂಜು, ಸದಸ್ಯ ಶ್ರೀಧರ್, ಆಯುಕ್ತ ಮಂಜುನಾಥ್ ಪ್ರತಿಭಟನಾಕಾರರ ಅಹವಾಲನ್ನು ಸ್ವೀಕರಿಸಿ ಸೂಕ್ತ ಪರಿಹಾರ ಕೊಡುವ ಭರವಸೆ ನೀಡಿದರು.
► ನಗರಸಭೆಯಿಂದ 8 ಲಕ್ಷ ರೂ. ಪರಿಹಾರ:
ನಗರಸಭೆಯ ನೇರಪಾವತಿ ಪೌರಕಾರ್ಮಿಕ ಉದಯಕುಮಾರ್ ಸಾವಿನ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕಾಗಿ ಪೌರಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಒಟ್ಟು 8 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ. ಇದಲ್ಲದೇ ಮೃತ ಕುಟುಂಬಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಖಾಯಂ ಹುದ್ದೆ ಕೊಡಿಸುವ ಭರವಸೆ ನೀಡಲಾಗಿದೆ.







