ಶೇ.50 ರಿಯಾಯಿತಿ: ಬೆಂಗಳೂರಿನಲ್ಲಿ 8 ದಿನಗಳಲ್ಲಿ 85 ಕೋಟಿ ರೂ. ಗಿಂತ ಹೆಚ್ಚು ಟ್ರಾಫಿಕ್ ದಂಡ ಸಂಗ್ರಹ

ಬೆಂಗಳೂರು, ಫೆ.10: ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ.50 ರಿಯಾಯಿತಿ ಲಾಭ ಪಡೆದಿರುವ ವಾಹನಗಳ ಮಾಲಕರು ಕಳೆದ 8 ದಿನಗಳಿಂದ 85 ಕೋಟಿ ರೂ. ಗಿಂತ ಹೆಚ್ಚಿನ ದಂಡ ಪಾವತಿಸಿದ್ದಾರೆ.
ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಸಂಬಂಧ ಇಲ್ಲಿಯವರೆಗೆ 85 ಕೋಟಿ ರೂ. ಗಿಂತ ಹೆಚ್ಚು ದಂಡ ಸಂಗ್ರಹಗೊಂಡಿದೆ. ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವ ಒಪ್ಪಿದ್ದ ಸರಕಾರವು, ಸಂಚಾರ ನಿಯಮ ಉಲ್ಲಂಘನೆಯ ಇ–ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ ರಿಯಾಯಿತಿ ನೀಡಿ ಆದೇಶ ಹೊರಡಿಸಿತ್ತು. ಫೆ.3ರಿಂದ ದಂಡ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ. ಫೆ.8ರ ವೇಳೆಗೆ ಒಟ್ಟು 51.85 ಕೋಟಿ ದಂಡ ಸಂಗ್ರಹವಾಗಿತ್ತು. ಇದೀಗ 75 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.
46 ನಿಯಮ ಉಲ್ಲಂಘನೆ..!
ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ.50 ರಿಯಾಯಿತಿ ಹಿನ್ನೆಲೆ ದಂಡ ಪಾವತಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಈ ನಡುವೆ ಅಶೋಕನಗರ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಬರೋಬ್ಬರಿ 46 ನಿಯಮ ಉಲ್ಲಂಘನೆ ಪ್ರಕರಣವನ್ನು ಭೇದಿಸಿದ್ದಾರೆ. ಬಳಿಕ, ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಸೈ ಮುಹಮ್ಮದ್ ಅಲಿ ಇಮ್ರಾನ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ದಂಡವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.







