ವಿದೇಶಗಳಿಗೆ ತೆರಳುವ ವಲಸೆ ಕಾರ್ಮಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿರಬೇಕು: ನಾಗರಾಜ್ ನಾಯಕ್

ಉಡುಪಿ: ವಿದೇಶಿ ವಲಸೆ ಕಾರ್ಮಿಕರ ಸಾಮಾಜಿಕ ರಕ್ಷಣೆಯ ಹಕ್ಕುಗಳು, ಅವರ ಉದ್ಯೋಗವನ್ನು ಸುಗಮಗೊಳಿಸುವ ಜೊತೆಗೆ ನಿಯಂತ್ರಣ ವನ್ನು ಮಾಡುತ್ತವೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಹೇಳಿದ್ದಾರೆ.
ಇಂದು ನಗರದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು, ಅಂತಾರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳ ಕುರಿತು ಸಂವಾದ, ಅರಿವು ಮತ್ತು ನೊಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚಾಗಿ ಕಡಿಮೆ ಹಾಗೂ ಕೌಶಲ್ಯ ಕೆಲಸಗಾರರ ಬೇಡಿಕೆ ಇದ್ದು, ನಮ್ಮ ದೇಶಗಳಿಂದ ಆರ್ಥಿಕ ಲಾಭಕ್ಕಾಗಿ ಕಾರ್ಮಿಕರು ವಿದೇಶಗಳಿಗೆ ಕೆಲಸಕ್ಕಾಗಿ ಹೋಗುತ್ತಿದ್ದಾರೆ. ಅವರುಗಳಿಗೆ ಸಾಮಾಜಿಕ ರಕ್ಷಣೆ ಸೇರಿದಂತೆ ಶೋಷಣೆಗೆ ಒಳಗಾಗದಂತೆ ಕ್ರಮವಹಿಸಲು ಸರ್ಕಾರ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಸ್ಥಾಪಿಸಿದೆ. ಇದರ ಪ್ರಯೋಜನವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು.
ವಿದೇಶಗಳಲ್ಲಿರುವ ನಮ್ಮ ಕಾರ್ಮಿಕರು ಅನೇಕ ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಒಳಗಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತವೆ. ಸಾಮಾನ್ಯವಾಗಿ ಅಲ್ಲಿನ ಭಾಷೆಯ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿ ಕೊರತೆ ಉಂಟಾಗುತ್ತದೆ. ಈ ಬಗ್ಗೆ ಮಾಹಿತಿ ಹೊಂದುವುದು ಅಗತ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಎಸ್. ಶಿವಕುಮಾರಯ್ಯ ಮಾತನಾಡಿ, ಕನಿಷ್ಠ ವಿಚಾರಗಳು ವಿದೇಶಿ ವಲಸೆ ಕಾರ್ಮಿಕರುಗಳಿಗೆ ಗೊತ್ತಿಲ್ಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಸಂಕಷ್ಟದ ಸುಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದರಲ್ಲಿಯೂ ಮಹಿಳೆಯರು ಸಮಸ್ಯೆಗೆ ಒಳಗಾದರೆ ಹೆಚ್ಚಿನ ಕಷ್ಟಕ್ಕೆ ಒಳಗಾಗುತ್ತಾರೆ.ಇವರ ನೆರವಿಗೆ ಅಧಿಕೃತ ಸಂಸ್ಥೆಗಳು ಇರುವುದು ಅತ್ಯವಶ್ಯ ಎಂದರು.
ಮಧ್ಯವರ್ತಿಗಳು ಕೆಲವೊಮ್ಮೆ ವಲಸೆ ಕಾರ್ಮಿಕರಿಗೆ ಹೆಚ್ಚಿನ ಆಸೆ ಆಮಿಷಗಳನ್ನು ಒಡ್ಡಿ ವಿದೇಶಕ್ಕೆ ಕಳುಹಿಸಿ ನಂತರದ ದಿನಗಳಲ್ಲಿ ಅವರುಗಳ ಬಗ್ಗೆ ಕಾಳಜಿ ವಹಿಸದೆ ಇದ್ದಾಗ ತೊಂದರೆಗೊಳಗಾಗುವುದು ನಿಶ್ಚಿತ. ಇದಕ್ಕೆ ಹಲವಾರು ನಿದರ್ಶನಗಳಿವೆ ಇವುಗಳ ಪರಿಹಾರಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಕಾರ್ಮಿಕ ಅಧಿಕಾರಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಸಾಮಾನ್ಯವಾಗಿ ಎಲ್ಲರಿಗೂ ಅವಶ್ಯವಾಗಿದ್ದು, ಕೆಲ ಮಂದಿ ಅನಿವಾರ್ಯವಾಗಿ ವಿದೇಶಗಳಿಗೆ ಹೋಗಿ ಕೆಲಸ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಉದ್ಯೋಗಸ್ಥರ ಕಲ್ಯಾಣಕ್ಕಾಗಿ ಸರ್ಕಾರದ ಶ್ರಮ ಹೆಚ್ಚಿದೆ.ಇತ್ತೀಚಿನ ಉಕ್ರೇನ್ ರಷ್ಯಾ ಯುದ್ದದ ಸಂದರ್ಭದಲ್ಲಿ ಅನೇಕ ಮೆಡಿಕಲ್ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾದಾಗ ಸರ್ಕಾರ ಅವರ ರಕ್ಷಣೆಗೆ ಮುಂದಾಗಿದ್ದನ್ನು ನಾವು ಕಂಡಿದ್ದೇವೆ. ಕಾರ್ಮಿಕರ ವಿಷಯದಲ್ಲೂ ಸಹ ಸರ್ಕಾರ ವಿಶೇಷ ಕಾಳಜಿ ವಹಿಸಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ವಲಸೆ ಕೇಂದ್ರ- ಕರ್ನಾಟಕದ ಕ್ಷೇತ್ರ ಕಾರ್ಯನಿರ್ವಾಹಕ ದೇವಿಪ್ರಸಾದ್ ರಾವ್, ಕಾರ್ಯಕ್ರಮ ವ್ಯವಸ್ಥಾಪಕಿ ಸಂಗೀತಾ ಇ ನಿಕ್ಕಮ್, ಕ್ಷೇತ್ರ ಸಂಶೋಧನಾ ಅಧಿಕಾರಿ ಹರೀಶ್ ವಲಸೆ ಕಾರ್ಮಿಕರು ಅತ್ಯಗತ್ಯವಾಗಿ ತಿಳಿದುಕೊಂಡಿ ರಬೇಕಾದ ವಿಷಯಗಳು ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.







