ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಸಿಐಡಿಯಿಂದ ಮತ್ತೆ 8 ಸಹಶಿಕ್ಷಕರ ಬಂಧನ

ಬೆಂಗಳೂರು, ಫೆ.10:2012-15ನೆ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಮತ್ತೆ ಎಂಟು ಮಂದಿ ಸಹಶಿಕ್ಷಕರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು 69ಕ್ಕೆ ಏರಿದೆ.
2012-13ನೆ ಸಾಲಿನ ನೇಮಕಾತಿ ಅಕ್ರಮ ಸಂಬಂಧ ಬಾಗಲಕೋಟೆ ಜಿಲ್ಲೆಯ ಮದನಬಾಲಿ ಶಾಲೆಯ ಸಹಶಿಕ್ಷಕ ಶ್ರೀಕಾಂತ್, ವಿಜಯನಗರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರದ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ನಾಯಕ ಪ್ರಸಾದ್ ರತ್ನು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಮರೂರು ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಮೆಹಬೂಬ್ ಪಾಷಾ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಹಶಿಕ್ಷಕಿ ಸುಜಾತ ಭಂಡಾರಿಯನ್ನು ಬಂಧಿಸಿದ್ದಾರೆ.
ಅದೇ ರೀತಿ, 2014-15ನೆ ಸಾಲಿನ ನೇಮಕಾತಿ ಸಂಬಂಧ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಸರಕಾರಿ ಪ್ರೌಢ ಶಾಲೆಯ ದೀಪಾರಾಣಿ ಜಿ.ಎನ್.ಮಧುಗಿರಿಯ ಪಾವಗಡ ತಾಲೂಕಿನ ನಾಗಲಮಡಿಕೆ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಮೋಹನ್ ಕುಮಾರ್, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಶಾಂತಿಲಾಲ್ ಚೌವ್ಹಾಣ್ ಬಂಧನಕ್ಕೊಳಗಾಗಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ..!
ಘಟನೆ ಹಿನ್ನೆಲೆ: 2014-15 ರಲ್ಲಿ ನಡೆದ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಸೌಧ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 465, 768, 471ರ ಅಡಿ ಎಫ್ಐಆರ್ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರಕ್ಕೆ ಸಿಐಡಿಗೆ ವರ್ಗಾಯಿಸಿತ್ತು.







