5 ವರ್ಷ ಹಿಂದಿನ ಪ್ರಕರಣ ; ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್‌ರನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

ಜಾಮನಗರ: ಜಿಲ್ಲಾಡಳಿತದ ಶರತ್ತುಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸಭೆಯಲ್ಲಿ ರಾಜಕೀಯ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಐದು ವರ್ಷ ಹಿಂದಿನ ಪ್ರಕರಣದಲ್ಲಿ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್(Hardik Patel)ರನ್ನು ಗುಜರಾತ್‌ನ ನ್ಯಾಯಾಲಯ ಶುಕ್ರವಾರ ದೋಷಮುಕ್ತಗೊಳಿಸಿದೆ. ಈ ಪ್ರಕರಣದಲ್ಲಿ ತನ್ನ ಆರೋಪವನ್ನು ದೃಢಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆಯೆಂದು ಅಭಿಪ್ರಾಯಿಸಿದ ಜಾಮ್‌ನಗರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮನೀಶ್ ನಂದಾನಿ(Manish Nandani) ಅವರು ಹಾರ್ದಿಕ್ ಪಟೇಲ್ ಹಾಗೂ ಸಹ ಆರೋಪಿ ಆಂಕಿತ್ ಗಾಡಿಯಾ(Ankit Gadia) ಅವರನ್ನು ದೋಷಮುಕ್ತಗೊಳಿಸಿದ್ದಾರೆ. ಪ್ರಸಕ್ತ ನಿವೃತ್ತ ಸರಕಾರಿ ನೌಕರನಾದ ದೂರುದಾರನಿಗೂ ಆತ ನೀಡಿದ್ದ ದೂರಿಗೆ ಸಂಬಂಧಿಸಿದ ಸಮಗ್ರ ವಿವರಗಳ ಬಗ್ಗೆ ಅರಿವಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಿಸಿದೆ.
ಪಾಟೀದಾರ್ ಸಮುದಾಯಕ್ಕೆ ಮೀಸಲಾತಿಯನ್ನು ಆಗ್ರಹಿಸಿ ಹಾರ್ದಿಕ್ ಪಟೇಲ್ ಅವರು ಪಾಟಿದಾರ್ ಮೀಸಲಾತಿ ಆಂದೋಲನ ಸಮಿತಿ (PAAS)ಯ ಆಶ್ರಯದಲ್ಲಿ ನಡೆಸಿದ ಚಳವಳಿಯ ನೇತೃತ್ವ ವಹಿಸಿದ್ದರು 2017ರ ನವೆಂಬರ್ 4ರಂದು ಅವರು ಜಾಮನಗರ ಜಿಲ್ಲೆಯ ಧುತರ್‌ಪುರ ಗ್ರಾಮದಲ್ಲಿ ನಡೆದ ರ್ಯಾಲಿಯಲ್ಲಿ ರಾಜಕೀಯ ಭಾಷಣವನ್ನು ಮಾಡಿದ್ದರು. ಇದಾದ ಒಂದು ತಿಂಗಳಿನ ಬಳಿಕ ಗುಜರಾತ್ ವಿಧಾನಸಭಾ ಚುನಾವಣೆ ನಡೆದಿತ್ತು.
ಈ ರ್ಯಾಲಿಗೆ ಮುನ್ನ ಆಂಕಿತ್ ಗಾಡಿಯಾ ಅವರು ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಅವರ ಕಚೇರಿಯನ್ನು ಸಂಪರ್ಕಿಸಿ ಪಟೇಲ್ ಅವರ ಕಾರ್ಯಕ್ರಮಕ್ಕೆ ಅನುಮತಿಯನ್ನು ಕೋರಿದ್ದರು. ಪಟೇಲ್ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆ ಕುರಿತಂತೆ ಜನರನ್ನುದ್ದೇಶಿಸಿ ಮಾತನಾಡಲಿರುವುದರಿಂದ ಆ ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಅವರು ಮನವಿ ಮಾಡಿದ್ದರು. ಮ್ಯಾಜಿಸ್ಟ್ರೇಟ್ ಕಾರ್ಯಾಲಯವು ಕೂಡಾ ಈ ನೆಲೆಯಲ್ಲಿ ಮಾತ್ರವೇ ರ್ಯಾಲಿಗೆ ಅನುಮತಿ ನೀಡಲಾಗಿದೆಯೆಂದು ಹೇಳಿದೆ.
ಆದಾಗ್ಯೂ, ರ್ಯಾಲಿಗೆ ಒಡ್ಡಲಾಗಿದ್ದ ಶರತ್ತುಗಳನ್ನು ಉಲ್ಲಂಘಿಸಿ ಹಾರ್ದಿಕ್ ರಾಜಕೀಯ ಪ್ರೇರಿತ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಸರಕಾರದ ಆದೇಶಗನ್ನು ಪಾಲನೆ ಮಾಡದ ಆರೋಪದಲ್ಲಿ ಹಾರ್ದಿಕ್ ಹಾಗೂ ಗಾಡಿಯಾ ವಿರುದ್ಧ ಗುಜರಾತ್ ಪೊಲೀಸ್ ಕಾಯ್ದೆಯ ಸೆಕ್ಷನ್‌ಗಳಾದ 36 (ಎ), 72 (2) ಹಾಗೂ 134ರಡಿ ಪ್ರಕರಣ ದಾಖಲಿಸಲಾಗಿತ್ತು.
ಸುಮಾರು 70 ದಿನಗಳ ಆನಂತರವಷ್ಟೇ ಎಫ್‌ಐಆರ್(FIR) ಯಾಕೆ ದಾಖಲಾಯಿತು ಹಾಗೂ ಪಟೇಲ್ ಅವರ ಭಾಷಣವನ್ನು ಒಳಗೊಂಡ ಸಿ.ಡಿ. ಯಾರ ವಶದಲ್ಲಿತ್ತೆಂಬುದನ್ನು ವಿವರಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆಯೆಂದು ಮ್ಯಾಜಿಸ್ಟ್ರೇಟ್ ನಂದಿನಿ ಗಮನಸೆಳೆದರು. ಇದಕ್ಕಿಂತಲೂ ಮಿಗಿಲಾಗಿ ರ್ಯಾಲಿಗೆ ಅನುಮತಿ ಕೋರಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ ಪಟೇಲ್ ಅಥವಾ ಗಡಿಯಾ ಸಹಿಹಾಕಿಲ್ಲವೆಂದು ಆದೇಶವು ತಿಳಿಸಿದೆ.







