‘ಕಾಸಿಗಾಗಿ ಪ್ರಶ್ನೆ’ ಹಗರಣದಲ್ಲಿ ಶಾಮೀಲಾದವರಲ್ಲಿ 6 ಮಂದಿ ಬಿಜೆಪಿ ಎಂಪಿಗಳು: ಜೈರಾಮ್ ರಮೇಶ್

ಹೊಸದಿಲ್ಲಿ,ಫೆ.10: ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ವಿರುದ್ಧ ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ನಡೆಸಿದ ಪ್ರಬಲ ವಾಗ್ದಾಳಿಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್(Jairam Ramesh) ಅವರು ಟೀಕಿಸಿದ್ದಾರೆ ಹಾಗೂ ಅವರು ಕೆಲವು ಹೊಸ ಪ್ರಶ್ನೆಗಳನ್ನು ಮೋದಿಯವರ ಮುಂದಿರಿಸಿದ್ದಾರೆ.
‘‘ ಗುರುವಾರ ಪ್ರಧಾನಿ ತನ್ನ ಸುದೀಘ ವಾಗ್ ಆಡಂಬರದ ಭಾಷಣದಲ್ಲಿ ಪ್ರಧಾನಿಯವರು ಸಂಸತ್‌ನಲ್ಲಿ ನಡೆದಿತ್ತೆನ್ನಲಾದ ‘ಕಾಸಿಗಾಗಿ ಪ್ರಶ್ನೆ ’ಹಗರಣಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವನ್ನು ದೂಷಿಸಿದ್ದಾರೆ. ಆದರೆ ವಾಸ್ತವಿಕವಾಗಿ ಈ ಹಗರಣದಲ್ಲಿ ಶಾಮೀಲಾದ 11 ಮಂದಿಯ ಪೈಕಿ ಆರು ಮಂದಿ ಬಿಜೆಪಿಯವರಾಗಿದ್ದಾರೆ’’ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
2005ರಲ್ಲಿ ಕೋಬ್ರಾಪೋಸ್ಟ್ ಎಂಬ ಆನ್‌ಲೈನ್ ಸುದ್ದಿಸಂಸ್ಥೆಯು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ, ಲೋಕಸಭೆಯಲ್ಲಿ ಸರಕಾರಕ್ಕೆ ಇರಿಸು ಮುರಿಸುವುಂಟು ಮಾಡುವಂತಹ ಪ್ರಶ್ನೆಗಳನ್ನು ಕೇಳುವುದಕ್ಕಾಗಿ 11 ಮಂದಿ ಸಂಸದರು ಲಂಚ ಪಡೆಯುತ್ತಿರುವುದನ್ನು ಬಯಲಿಗೆಳೆದಿತ್ತು. ಈ ಕುಟುಕು ಕಾರ್ಯಾಚರಣಣೆಯ ವಿಡಿಯೋವನ್ನು ಖಾಸಗಿ ಟಿವಿವಾಹಿನಿ ಪ್ರಸಾರ ಮಾಡಿತ್ತು.
ಅದಾನಿ ಹಗರಣಕ್ಕೆ ಸಂಬಂಧಿಸಿ ತನ್ನ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಲೋಕಸಭೆಯಲ್ಲಿ ವಾಗ್ದಾಲಿ ನಡೆಸಿದ ಮರುದಿನ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿಯವರು ಹಿಂದಿನ ಯುಪಿಎ ಸರಕಾರದ 10 ವರ್ಷಗಳ ಆಳ್ವಿಕೆಯು ದೇಶವನ್ನು ನಿಸ್ತೇಜಗೊಳಿಸಿತ್ತು ಎಂದು ಹೇಳಿದ್ದರು.
ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾರ್ಪಣೆ ಸಂದರ್ಭ ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಮೋದಿ ಅವರು, ‘‘ 2004ರಿಂದ 2014ರ ಅವಧಿಯು ಹಗರಣಗಳ ದಶಕವಾಗಿದೆ ಹಾಗೂ ಪ್ರತಿಯೊಂದು ಅವಕಾಶವನ್ನೂ ಬಿಕ್ಕಟ್ಟಾಗಿ ಪರಿವರ್ತಿಸುವುದೇ ಯುಪಿಎನ ಟ್ರೇಡ್‌ಮಾರ್ಕ್ ಆಗಿದೆ ’’ ಎಂದರು. ಮೋದಿಯನ್ನು ನಿಂದಿಸುವುದೇ ತನ್ನ ಹಿಡಿಯಬೇಕಾದ ದಾರಿಯಾಗಿದೆ ಎಂದು ಕಾಂಗ್ರೆಸ್ ಭಾವಿಸಿರಬಹುದು. ಆದರೆ ಭಾರತದ 140 ಕೋಟಿ ಮಂದಿ ತನ್ನ ರಕ್ಷಕವಚವಾಗಿದ್ದಾರೆಂದು ಹೇಳಿದ್ದರು.







