ಐತಿಹಾಸಿಕ ಲಕ್ಕುಂಡಿ ಉತ್ಸವ-2023ಕ್ಕೆ ಸಿಎಂ ಬೊಮ್ಮಾಯಿ ಚಾಲನೆ
''ಹಂಪಿ ಸರ್ಕಿಟ್ ನಲ್ಲಿ ಲಕ್ಕುಂಡಿ ಸೇರ್ಪಡೆ''

ಗದಗ(ಲಕ್ಕುಂಡಿ) ಫೆಬ್ರವರಿ 10: ಹಂಪಿ ಸರ್ಕಿಟ್ ನಲ್ಲಿ ಲಕ್ಕುಂಡಿಯನ್ನು ಮುಂಬರುವ ದಿನಗಳಲ್ಲಿ ಸೇರ್ಪಡೆ ಮಾಡಲಾಗುವುದು ಹಾಗೂ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು ಎಮದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ಲಕ್ಕುಂಡಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದಲ್ಲಿದ್ದಂತೆಯೇ ಸಮೃದ್ಧವಾಗಿದ್ದ ಗದಗ ಜಿಲ್ಲೆಯ ವೈಭವದ ಕುರಿತು ಶಾಸನಗಳು ಹೇಳುತ್ತವೆ. ಅದ್ಭುತ ಕಲಾಕೃತಿಗಳ ಸಂಗಮವಾದ ಲಕ್ಕುಂಡಿ. ಇದನ್ನು ಜಗತ್ಪ್ರಸಿದ್ದ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದು, ಪ್ರವಾಸೋದ್ಯಮಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಕನ್ನಡಿಗರ ಗುಣಧರ್ಮಗಳ ಪ್ರಸಾರ: ಗದಗ ಜಿಲ್ಲೆ ಕುಮಾರವ್ಯಾಸನ ಕರ್ಮಭೂಮಿ, ರನ್ನನ ಜನ್ಮಭೂಮಿ, ,ಕನ್ನಡ ಹುಟ್ಟಲು, ಅದರ ವೈಭವದೊಡ್ಡದಾಗ ಬೆಳೆಯಲು ರನ್ನ, ಪಂಪರ ಸಾಹಿತ್ಯ ಕಾರಣ. ಅವರ ಸಾಹಿತ್ಯಕ್ಕೆ ದಾನಚಿಂತಾಮಣಿ ಅತ್ತಿಮಬ್ಬೆಆಶ್ರಯ ನೀಡದ್ದಳು. ಕನ್ನಡಿಗರ ಗುಣಧರ್ಮಗಳನ್ನು ಸಾರುವ ಕೆಲಸಕ್ಕೆ ಮಹತ್ವ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
ನೀರಾವರಿಗೆ ಕಾಯಕಲ್ಪ:
ನೀರಾವರಿ ಕಾಯಕಲ್ಪ ನೀಡಲು ತಮ್ಮ ಪ್ರಮುಖ ಪಾತ್ರವಿತ್ತು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಏತ ನೀರಾವರಿ ಯೋಜನೆಗಳನ್ನು ಫೂರ್ಣಗೊಳಿಸಿದ್ದನ್ನು ವಿವರಿಸಿದರು. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ತುಂಗೆಯ ನೀರನ್ನು ಗದಗ ಜಿಲ್ಲೆಯ ತಾಲ್ಲೂಕುಗಳಿಗೆ ಒದಗಿಸಿ ಇದಕ್ಕೆ ಅಗತ್ಯ ಅನುದಾನವನ್ನು ನೀಡುವುದಾಗಿ ತಿಳಿಸಿದರು. ಕಳಸಾ ಬಂಡೂರಿ ಯೋಜನೆಗೆ ಹೋರಾಟ ಮಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಲಿಂಕಿಂಗ್ ಕಾಲುವೆ ನಿರ್ಮಿಸಿ ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವ ಪ್ರಮುಖ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾಗಿ ತಿಳಿಸಿದರು. ಗೋವಾದ ತಕರಾರಿನಿಂದ ನೆನೆಗುದಿಗೆ ಬಿದ್ದು ಈಗ ನ್ಯಾಯಮಂಡಳಿ ಆದೇಶವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ನ್ಯಾಯಮಂಡಳಿ ಆದೇಶಕ್ಕೆ ಅಧಿಸೂಚನೆ ಹೊರಡಿಸಿದೆ. ಡಿಪಿಆರ್ ಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕದೊಂದಿಗೆ ನಿಂತಿದೆ ಎಂದರು. ಆದಷ್ಟು ಬೇಗನೆ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದರು.
ನವಕರ್ನಾಟಕದ ನಿರ್ಮಾಣ: ನರಗುಂದ ಮತ್ತು ರೋಣ ತಾಲ್ಲೂಕಿನ ಮಲಪ್ರಭೆ ನದಿಯನ್ನು ಮಹಾದಾಯಿ ಯೋಜನೆಗೆ ಜೋಡಿಸಿ, ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಸಂಗೀತದ ನೆಲೆವೀಡಾಗಿರುವ ಈ ಕ್ಷೇತ್ರ ಪುಟ್ಟರಾಜು ಗವಾಯಿ , ಪಂಚಾಕ್ಷರಿ ಗವಾಯಿಗಳು ಸಾವಿರಾರು ಅಂಧರಿಗೆ ಬದುಕನ್ನು ನೀಡಿರುವ ನಾಡಿದು. ಧಾರ್ಮಿಕವಾಗಿ ತೋಂಟದಾರ್ಯ ಮಠ, ಶಿವಾನಂದ ಮಠ ನಮಗೆ ದಾರಿದೀಪವಾಗಿದೆ. ಈ ಎಲ್ಲ ಉತ್ತಮ ಪರಿಸರದಲ್ಲಿ ನವಕರ್ನಾಟಕದ ನಿರ್ಮಾಣ ಮಾಡಲಾಗುವುದು ಎಂದರು.
ದುಡಿಯುವ ವರ್ಗಕ್ಕೆ ಬೆಂಬಲ : ರಾಜ್ಯವನ್ನು ದುಡಿಯುವ ವರ್ಗ ಮಾತ್ರ ಕಟ್ಟಲು ಸಾದ್ಯ. ದುಡಿಯುವ ವರ್ಗಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ. ಪ್ರಧಾನಿ ಮೋದಿಯವರು ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯ ಗುರಿ ನೀಡಿದ್ದಾರೆ. ರೈತಮಕ್ಕಳು ವಿವಿಧ ವೃತ್ತಿಗಳಲ್ಲಿ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿ ಕಾರ್ಮಿಕರು, ಮೀನುಗಾರರು, ನೇಕಾರರು, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಕಸುಬುದಾರರ ವೃತ್ತಿ ಉನ್ನತೀಕರಣಕ್ಕಾಗಿ ಕಾಯಕ ಯೋಜನೆ, ಕುರಿಗಾಹಿಗಳಿಗೆ ಅಮೃತ ಕುರಿಗಾಹಿ ಯೋಜನೆ ಜಾರಿಗೊಳಿಸಲಾಗಿದೆ. ದುಡಿಯುವ ವರ್ಗಕ್ಕೆ ಜನಪರ ಯೋಜನೆಗಳನ್ನು ಯಾವುದೇ ಜಾತಿ ಬೇಧಭಾವವಿಲ್ಲದೆ ಜಾರಿಗೊಳಿಸಲಾಗಿದೆ ಎಂದರು.
ಗದಗ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ನಿರ್ಮಾಣಕ್ಕೆ ಶೀಘ್ರದಲ್ಲಿ ಘೋಷಣೆ :
ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 5000 ಕೋಟಿ ರೂ. ಆರ್ಥಿಕ ಕೊರತೆಯಿತ್ತು, ಈ ವರ್ಷವೂ 15 ಸಾವಿರ ಕೋಟಿಗೂ ಮೀರಿ ಆದಾಯ ಗಳಿಸಲಾಗಿದೆ. ಸೋರಿಕೆಯನ್ನು ತಡೆದು, ಆರ್ಥಿಕತೆಗೆ ಇಂಬು ನೀಡಲಾಗುತ್ತಿದೆ. ಗದಗದಲ್ಲಿ ಉದ್ಯಮ ಬಂದರೆ ಉದ್ಯೋಗ ಹೆಚ್ಚುತ್ತದೆ. ಗದಗ ಜಿಲ್ಲೆಯ ಔದ್ಯೋಗೀಕರಣಕ್ಕೆ ಜಮೀನನ್ನು ಗುರುತಿಸಿ, ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡಲು ಸರ್ಕಾರ ಸಿದ್ಧವಿದೆ. ಜಮೀನನ್ನು ಗುರುತಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಬೇಕು. ಉದ್ಯೋಗಾವಕಾಶದ ಮೂಲಕ ಯುವಕರ ಭವಿಷ್ಯ ಭದ್ರಗೊಳಿಸಬಹುದಾಗಿದೆ. ಜಮೀನು ಶೀಘ್ರದಲ್ಲಿ ಗುರುತಿಸಿ ನೀಡಿದರೆ, ಗದಗ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ನಿರ್ಮಾಣದ ಘೋಷಣೆಯನ್ನು ಮಾಡಲಾಗುವುದು ಎಂದರು.
ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಬಿ.ಎ. ಬಸವರಾಜ, ಬಿ.ಶ್ರೀರಾಮುಲು, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.







