ಹೈಕೋರ್ಟ್‌ಗಳಲ್ಲಿ 59 ಲಕ್ಷ, ಸುಪ್ರೀಂಕೋರ್ಟ್‌ನಲ್ಲಿ 69,511 ಪ್ರಕರಣಗಳು ಬಾಕಿ: ಸಂಸತ್‌ಗೆ ಕೇಂದ್ರ ಸರಕಾರದಿಂದ ಮಾಹಿತಿ

ಹೊಸದಿಲ್ಲಿ, ಫೆ. 10: ಫೆಬ್ರವರಿ 1ರ ವೇಳೆಗೆ, ದೇಶಾದ್ಯಂತದ ಹೈಕೋರ್ಟ್(High Court)ಗಳಲ್ಲಿ 59,87,477 ಪ್ರಕರಣಗಳು ಮತ್ತು ಸುಪ್ರೀಂ ಕೋರ್ಟ್(Supreme Court)ನಲ್ಲಿ 69,511 ಪ್ರಕರಣಗಳು ಬಾಕಿಯಿದ್ದವು ಎಂದು ಕೇಂದ್ರ ಸರಕಾರ(Central Govt)ವು ಗುರುವಾರ ರಾಜ್ಯಸಭೆಗೆ ತಿಳಿಸಿದೆ.
ತೆಲುಗುದೇಶಂ ಪಕ್ಷದ ಸಂಸದ ಕನಕಮೇದಲ ರವೀಂದ್ರಕುಮಾರ್(Ravindra Kumar) ಕೇಳಿದ ಪ್ರಶ್ನೆಗೆ, ಕೇಂದ್ರ ಕಾನೂನು ಸಚಿವ ಕಿರಣ್ ರಿಜೀಜು (Kiran Rijiju)ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ಹೈಕೋರ್ಟ್‌ಗಳಲ್ಲಿ ಬಾಕಿಯಿರುವ 59,87,477 ಪ್ರಕರಣಗಳ ಪೈಕಿ, ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ಅಲಹಾಬಾದ್ ಹೈಕೋರ್ಟ್ (10,30,185)ನಲ್ಲಿ ಬಾಕಿಯಿವೆ. ನಂತರದ ಸ್ಥಾನಗಳಲ್ಲಿ ರಾಜಸ್ಥಾನ ಹೈಕೋರ್ಟ್ (6,40,267) ಮತ್ತು ಬಾಂಬೆ ಹೈಕೋರ್ಟ್ (6,20,586) ಗಳಿವೆ. ಅತಿಕಡಿಮೆ ಸಂಖ್ಯೆಯ ಮೊಕದ್ದಮೆಗಳು ಸಿಕ್ಕಿಮ್ ಹೈಕೋರ್ಟ್ (171) ನಲ್ಲಿದೆ.
ಜಿಲ್ಲಾ ಮತ್ತು ಅದರ ಅಧೀನ ನ್ಯಾಯಾಲಯಗಳಲ್ಲಿ 2022 ಡಿಸೆಂಬರ್ 31ರ ವೇಳೆಗೆ, 4.34 ಕೋಟಿಗೂ ಅಧಿಕ ಪ್ರಕರಣಗಳು ಬಾಕಿಯಿದ್ದವು.
ಫೆಬ್ರವರಿ 2ರಂದು ನೀಡಿದ ಪ್ರತ್ಯೇಕ ಉತ್ತರದಲ್ಲಿ, ಕಳೆದ 25 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ 81 ಪ್ರಕರಣಗಳು, ಹೈಕೊರ್ಟ್‌ಗಳಲ್ಲಿ 1,24,810 ಪ್ರಕರಣಗಳು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 2,76,208 ಪ್ರಕರಣಗಳು ಬಾಕಿಯಿವೆ ಎಂದು ರಿಜೀಜು ಹೇಳಿದ್ದರು.
ಜನತಾ ದಳ (ಯು) ಸಂಸದ ರಾಮ್‌ನಾಥ್ ಠಾಕೂರ್ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡುತ್ತಿದ್ದರು.







