409 ಕೋಟಿ ರೂ. ಬ್ಯಾಂಕ್ ವಂಚನೆ ಆರೋಪ: ಶಾಸಕ ಗುಟ್ಟೆ ವಿರುದ್ಧ ಸಿಬಿಐ ಎಫ್‌ಐಆರ್

ಹೊಸದಿಲ್ಲಿ, ಫೆ.10: 409.26 ಕೋಟಿ ರೂ. ಬ್ಯಾಂಕ್ ವಂಚನೆಯ ಆರೋಪಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಆರ್‌ಎಸ್‌ಪಿ(RSP) ಶಾಸಕ ಹಾಗೂ ಸಕ್ಕರೆ ಉದ್ಯಮಿ ರತ್ನಾಕರ್ ಗುಟ್ಟೆ(Ratnakar Gutte) ಮತ್ತು ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಲಿಮಿಟೆಡ್ ಕಂಪೆನಿಯ ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದೆಯೆದಂದು ಸಿಬಿಐ ಶುಕ್ರವಾರ ತಿಳಿಸಿದೆ.
ಗುಟ್ಟೆ ಜೊತೆಗೆ ಅವರ ಪುತ್ರರು ಹಾಗೂ ಇತರ ಕುಟುಂಬ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಲಿಮಿಟೆಡ್ ಕಂಪೆನಿಯು 2008 ಹಾಗೂ 2015ರ ನಡುವಿನ ಅವಧಿಯಲ್ಲಿ ಯುಕೋ ಬ್ಯಾಂಕ್ ನೇತೃತ್ವದ ವಿವಿಧ ಬ್ಯಾಂಕ್‌ಗಳ ಸಮೂಹದಿಂದ 577.16 ಕೋಟಿ ರೂ. ಮೊತ್ತದ ವಿವಿಧ ಸಾಲ ಸೌಲಭ್ಯಗಳನ್ನು ಅವಧಿ ಸಾಲದ ರೂಪದಲ್ಲಿ ಪಡೆದಿತ್ತು.
ಸಾಲವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನಾಗಪುರ ಹಾಗೂ ಪರ್ಬಾನಿಯಲ್ಲಿ ಗುಟ್ಟೆ ಹಾಗೂ ಇತರ ಆರೋಪಿಗಳಿಗೆ ಸೇರಿದ ಒಟ್ಟು ಐದು ಸ್ಥಳಗಳ ಮೇಲೆ ದಾಳಿ ನಡೆಸಿತು. ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಗುಟ್ಟೆ ಹಾಗೂ ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಲಿಮಿಟೆಡ್ ಕಂಪೆನಿಯ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು.





