ಟರ್ಕಿ-ಸಿರಿಯಾ ಭೂಕಂಪ ಸಾವಿನ ಸಂಖ್ಯೆ 21,000ಕ್ಕೆ ಏರಿಕೆ: ವರದಿ

ಅಂಕಾತ, ಫೆ.10: ಟರ್ಕಿ ಮತ್ತು ಸಿರಿಯಾದಲ್ಲಿ ಕಳೆದ ಸೋಮವಾರ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 21,000ಕ್ಕೆ ಏರಿಕೆಯಾಗಿದ್ದು, ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳಡಿ ಇನ್ನೂ ಸಿಲುಕಿರುವ ಸಾಧ್ಯತೆಯಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಿರಂತರ ಮುಂದುವರಿದಿದೆ ಎಂದು ವರದಿಯಾಗಿದೆ.
ಆದರೆ, ಜೀವ ಉಳಿಸುವ ನಿರ್ಣಾಯಕ 3 ದಿನಗಳ ಅವಧಿ ಅಂತ್ಯಗೊಂಡಿರುವುದರಿಂದ ಅವಶೇಷಗಳಡಿ ಸಿಲುಕಿರುವವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ರಕ್ಷಣಾ ತಂಡದ ಹೇಳಿಕೆ ತಿಳಿಸಿದೆ.
ಈ ಮಧ್ಯೆ, ದಕ್ಷಿಣ ಟರ್ಕಿಯ ಅಂತಾಕ್ಯ ನಗರದಲ್ಲಿ ಸುಮಾರು 80 ಗಂಟೆಯ ರಕ್ಷಣಾ ಕಾರ್ಯಾಚರಣೆಯ ಬಳಿಕ 16 ವರ್ಷದ ಯುವತಿ ಮೆಲ್ಡಾ ಅಡಟಾಸ್ ಎಂಬಾಕೆ ಪವಾಡಸದೃಶವಾಗಿ ಬದುಕುಳಿದಿರುವುದು ಪತ್ತೆಯಾಗಿದ್ದು ಆಕೆಯನ್ನು ರಕ್ಷಿಸಲಾಗಿದೆ.
ಅಂತರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ ಅಧ್ಯಕ್ಷೆ ಮಿರ್ಜಾನಾ ಸ್ಪೊಲ್ಜರಿಕ್ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಮತ್ತು ವಿಶ್ವಸಂಸ್ಥೆ ಮಾನವೀಯ ಉಪಕ್ರಮಗಳ ಸಮಿತಿ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ ಅವರೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಟರ್ಕಿಯ ನಗರ ಗಝಿಯಾಂಟೆಪ್‌ನಲ್ಲಿ ಶುಕ್ರವಾರ ತಾಪಮಾನ ಮೈನಸ್ 3 ಡಿಗ್ರಿಗೆ ಕುಸಿದಿದ್ದು ತೀವ್ರ ಚಳಿಯ ನಡುವೆಯೇ ಸಾವಿರಾರು ಜನತೆ ತೆರೆದ ಬಯಲಿನಲ್ಲಿ ರಾತ್ರಿ ಕಳೆಯುವಂತಾಗಿದೆ.