ಪುತ್ರಿಯನ್ನೇ ಅಪಹರಿಸಿದ ಪ್ರಕರಣ: ದೆಹಲಿಯ ಪಕ್ಷದ ಯುವ ಮೋರ್ಚಾ ಅಧ್ಯಕ್ಷನನ್ನು ಉಚ್ಚಾಟಿಸಿದ ಬಿಜೆಪಿ

ಹೊಸ ದಿಲ್ಲಿ: ತನ್ನ ಪುತ್ರಿಯನ್ನೇ ಅಪಹರಿಸಿದ ಆರೋಪಕ್ಕೆ ಗುರಿಯಾಗಿರುವ ದೆಹಲಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಾಸು ರುಖಾರ್ (VasuRukhar) ನನ್ನು ಬಿಜೆಪಿಯು ಶುಕ್ರವಾರ ಪಕ್ಷದಿಂದ ಉಚ್ಚಾಟಿಸಿದೆ ಎಂದು hindustantimes.com ವರದಿ ಮಾಡಿದೆ.
ಈ ಸಂಬಂಧ ವಾಸು ರುಖಾರ್‌ಗೆ ಪತ್ರವೊಂದನ್ನು ಬರೆದಿರುವ ದೆಹಲಿಯ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ, ವಾಸು ರುಖಾರ್ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ, ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರ ಸಹಿ ಹೊಂದಿರುವ ಈ ಪತ್ರದಲ್ಲಿ, "ನಿಮ್ಮ ನಡತೆ ಮತ್ತು ಚಟುವಟಿಕೆಗಳನ್ನು ಗಮನಿಸಿ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈ ಕೂಡಲೇ ಬಿಡುಗಡೆಗೊಳಿಸಲಾಗಿದೆ ಮತ್ತು ಪಕ್ಷದಿಂದ ತಕ್ಷಣವೇ ಉಚ್ಚಾಟಿಸಲಾಗಿದೆ" ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರ ಪುತ್ರಿಯನ್ನು ಕೇಂದ್ರ ದೆಹಲಿಯ ಝಂಡೇವಾಲನ್‌ನಿಂದ ಅಪಹರಿಸಿ, ಮೌರೀಸ್ ನಗರದ ದೇವಾಲಯವೊಂದರ ಬಳಿ ಅನಾಥವಾಗಿ ಬಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಮೂವರು ಪುತ್ರಿಯರನ್ನು ಹೊಂದಿರುವುದರಿಂದ ಒಂದೂವರೆ ವರ್ಷದ ಮಗುವನ್ನು ಅನಾಥವಾಗಿ ಬಿಡುವಂತೆ ತಮ್ಮ ಪತ್ನಿಯ ಮೇಲೆ ವಾಸು ರುಖಾರ್ ಒತ್ತಡ ಹೇರಿದ್ದರು ಎಂಬ ಆರೋಪವಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ತಮ್ಮ ಉಚ್ಚಾಟನೆಯ ಕುರಿತು ವಾಸು ರುಖಾರ್ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಈ ಉಚ್ಚಾಟನೆಯ ನಿರ್ಣಯವನ್ನು ಪೊಲೀಸರ ತನಿಖೆ ಹಾಗೂ ಪಕ್ಷದಿಂದ ನಡೆದ ಮನೆಮಂದಿಯ ವಿಚಾರಣೆಯನ್ನು ಆಧರಿಸಿ ಕೈಗೊಳ್ಳಲಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.







