ಬಿಜೆಪಿ ಬಜೆಟ್ ಗೂ ಮೊದಲೆ ಕಾಂಗ್ರೆಸ್ ನಿಂದ ಮನೆ ಮನೆಗೆ 'ಭರವಸೆಯ ಚೆಕ್'!

ಬೆಂಗಳೂರು: ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆ ಕುರಿತ ಕಾಂಗ್ರೆಸ್ ಗ್ಯಾರಂಟಿ ಕೋಟಿ ಕಾರ್ಡ್ ಗಳು ಮನೆ, ಮನೆ ತಲುಪಲು ಸಜ್ಜಾಗಿವೆ.
ಕೆಪಿಸಿಸಿ ಕಚೇರಿಯಲ್ಲಿ ಈ ಕಾರ್ಡ್ ಗಳನ್ನು ಮಾಧ್ಯಮದವರಿಗೆ ಶನಿವಾರ ಪ್ರದರ್ಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದರು.
'ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಐತಿಹಾಸಿಕ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡಲು ಪಕ್ಷ ತೀರ್ಮಾನಿಸಿದೆ' ಎಂದು ತಿಳಿಸಿದರು.
'ಈ ಯೋಜನೆಗಳ ಮೂಲಕ ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷವನ್ನು ಜನರಿಗೆ ನೀಡಲಾಗುವುದು. ಈ ಕುರಿತು ನಾನು ಹಾಗೂ ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ಅನ್ನು ಪಕ್ಷದ ಎಲ್ಲಾ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೆಪಿಸಿಸಿ ಕಚೇರಿಯಲ್ಲಿ ಪಡೆದು, ನಿಮ್ಮ ಕ್ಷೇತ್ರದಲ್ಲಿ ಪ್ರತಿ ಬೂತ್ ನ ಮನೆ ಮನೆಗೂ ನೀಡಬೇಕು' ಎಂದು ಕರೆ ನೀಡಿದರು.
''ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಹುಮಾನ''
'ಈ ಗ್ಯಾರಂಟಿ ಕಾರ್ಡ್ ಅನ್ನು ಜನರಿಗೆ ನೀಡಿ ನಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಯಾರಿಗೆಲ್ಲ ಈ ಯೋಜನೆ ಬಗ್ಗೆ ಆಸಕ್ತಿ ಇದೆ ಎಂದು ಅವರ ವಿವರ ಪಡೆಯಬೇಕು. ಈ ಸಮಯದಲ್ಲಿ ಮನೆ ಮನೆಗೆ ಹೋಗಿ ಕಾರ್ಡ್ ನೀಡುವ ನೋಂದಣಿದಾರರ ಹೆಸರು, ದೂರವಾಣಿ ಸಂಖ್ಯೆಯನ್ನು ನೀಡಬೇಕು. ಪ್ರತಿ ಬ್ಲಾಕ್ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಹೆಚ್ಚು ಮನೆಗಳಿಗೆ ಈ ಕಾರ್ಡ್ ವಿತರಣೆ ಮಾಡುತ್ತಾರೋ ಅವರಿಗೆ ಆಯಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಹುಮಾನ ನೀಡಬೇಕು' ಎಂದರು.
'ಈ ಅವಕಾಶವನ್ನು ಬಳಸಿಕೊಂಡು ಜನರಿಗೆ ಕಾಂಗ್ರೆಸ್ ಕೊಡುಗೆಯನ್ನು ಜನರಿಗೆ ತಲುಪಿಸಬೇಕು. ಒಟ್ಟು 1 ಕೋಟಿ ಕಾರ್ಡ್ ಗಳನ್ನು ಮನೆಗೆ ಕಳುಹಿಸಿಕೊಡಬೇಕು ಎಂದು ನಾನು ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ' ಎಂದು ತಿಳಿಸಿದರು.
ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳ ಮೂಲಕ ವರ್ಷಕ್ಕೆ ₹42,000ದಂತೆ 5 ವರ್ಷಕ್ಕೆ ₹ 2 ಲಕ್ಷವನ್ನು ಜನರಿಗೆ ನೀಡಲಾಗುವುದು.
— Karnataka Congress (@INCKarnataka) February 11, 2023
ಈ ಕುರಿತು ನಾನು, @siddaramaiah ಅವರು ಸಹಿ ಹಾಕಿರುವ ಗ್ಯಾರಂಟಿ ಕಾರ್ಡನ್ನು ಎಲ್ಲಾ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು KPCC ಕಚೇರಿಯಲ್ಲಿ ಪಡೆದು ನಿಮ್ಮ ಕ್ಷೇತ್ರದ ಮನೆ ಮನೆಗೂ ನೀಡಬೇಕು.
- @DKShivakumar pic.twitter.com/oJxUmerhN5








