ಇವರನ್ನು ಹೀಗೆ ಬಿಟ್ಟರೆ ರಾಜ್ಯವನ್ನು ಬರ್ಬಾದ್ ಮಾಡಿಬಿಡುತ್ತಾರೆ: BJP, JDS ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
''ರಾಜ್ಯದ ಮೇಲಿನ ಸಾಲ 5.40ಲಕ್ಷ ಕೋಟಿ ರೂ.ಗಳಿಗೂ ಅಧಿಕ''

ವಿಜಯಪುರ, ಫೆ. 11: ‘ರಾಜ್ಯದ ಒಟ್ಟು ಸಾಲ 5.40 ಲಕ್ಷ ಕೋಟಿ ರೂ.ದಾಟಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸೇರಿಕೊಂಡು 3ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ರಾಜ್ಯವನ್ನು ಬರ್ಬಾದ್ ಮಾಡಿಬಿಡುತ್ತಾರೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಜಿಲ್ಲೆಯ ಸಿಂಧಗಿಯಲ್ಲಿ ಪಕ್ಷದಿಂದ ಏರ್ಪಡಿಸಿದ್ದ ಪ್ರಜಾಧ್ವನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ನಾನು ಅಧಿಕಾರದಿಂದ ಕೆಳಗಿಳಿಯುವ ವೇಳೆ ರಾಜ್ಯದ ಒಟ್ಟು ಸಾಲ 2.42ಲಕ್ಷ ಕೋಟಿ ರೂ. ಆದರೆ, ಇದೀಗ ಆ ಮೊತ್ತ ಮಿತಿ ಮೀರಿ ಏರಿಕೆಯಾಗಿದೆ. ಅದೇ ರೀತಿ ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಮೇಲೆ 53ಲಕ್ಷ ಕೋಟಿ ರೂ.ಸಾಲ ಇತ್ತು. ಇದೀಗ 155 ಲಕ್ಷ ಕೋಟಿ ರೂ.ದಾಟಿದೆ. 100ಲಕ್ಷ ಕೋಟಿ ರೂ.ಗೂ ಅಧಿಕ ಸಾಲ ಮಾಡಿದ್ದಾರೆ. ಹೀಗಾದರೆ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನಿಸಿದರು.
ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇವೆ: ನಾವು ಅಧಿಕಾರಕ್ಕೆ ಬಂದರೆ 200 ಯುನಿಟ್ ವಿದ್ಯುತ್, ಮನೆಯ ಯಜಮಾನಿಗೆ ತಿಂಗಳಿಗೆ 2ಸಾವಿರ ರೂ.ನಂತೆ ವರ್ಷಕ್ಕೆ 24ಸಾವಿರ ರೂ.ಧನಸಹಾಯ ಹಾಗೂ 10ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ. ನೀರಾವರಿ ಯೋಜನೆಗಳಿಗೆ 2ಲಕ್ಷ ಕೋಟಿ ರೂ.ನೀಡಿ ಬಾಕಿ ಇರುವ ಎಲ್ಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. ಇದಕ್ಕೆ ತಪ್ಪಿದರೆ ಒಂದು ಕ್ಷಣವೂ ರಾಜಕೀಯದಲ್ಲಿ ಇರುವುದಿಲ್ಲ. ನಮ್ಮ ಮೇಲೆ ವಿಶ್ವಾಸವಿಟ್ಟು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದು, ಆ ಮೂಲಕ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಮುಂದೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವುಗಳನ್ನು ಈಡೇರಿಸುವ ಕೆಲಸ ಮಾಡುವ ಉದ್ದೇಶದಿಂದ. ನಾವು ನುಡಿದಂತೆ ನಡೆದವರು. ನಾವು ಜನರ ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ. ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ ಸಹಿತ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೆವು ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಅವರು ನುಡಿದರು.
ಸಂಸದ ತೇಜಸ್ವಿ ಸೂರ್ಯ ‘ರೈತರ ಸಾಲಮನ್ನಾ ಮಾಡಿದ್ದರಿಂದ ದೇಶ ಹಾಳಾಗಿ ಹೋಗುತ್ತೆ, ಸಾಲಮನ್ನಾ ಮಾಡಬಾರದು’ ಎಂದು ಹೇಳಿದ್ದಾರೆ. ಇದು ಬಿಜೆಪಿ ಪಕ್ಷದ ಒಟ್ಟು ಅಭಿಪ್ರಾಯ. ಬರಗಾಲದಿಂದ ರೈತರು ಸಮಸ್ಯೆಯಲ್ಲಿರುವುದನ್ನು ಅರ್ಥಮಾಡಿಕೊಂಡು 22 ಲಕ್ಷಕ್ಕೂ ಅಧಿಕ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 8,165 ಕೋಟಿ ರೂ.ಸಾಲಮನ್ನಾವನ್ನು ನಾವು ಮಾಡಿದ್ದೇವೆ. ಬಿಜೆಪಿಯವರು ಅಂಬಾನಿ, ಅದಾನಿಯಂತ ಬಂಡವಾಳಶಾಹಿಗಳ 14ಲಕ್ಷ ಕೋಟಿ ರೂ.ಸಾಲಮನ್ನಾ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.







